ನಾಳೆ ಸಿದ್ಧಾರೂಢ ಶ್ರೀಗಳ ಅಂಚೆ ಚೀಟಿ ಲೋಕಾರ್ಪಣೆ

| Published : Jul 05 2024, 12:47 AM IST

ಸಾರಾಂಶ

ಸಿದ್ಧಾರೂಢರ ಭಾವಚಿತ್ರ ಹೊಂದಿದ ಅಂಚೆಚೀಟಿ ಬಿಡುಗಡೆ ಮಾಡಬೇಕೆಂದು ಭಕ್ತರು, ಧರ್ಮದರ್ಶಿಗಳು ಪ್ರಯತ್ನಿಸಿದ್ದರು. ಆದರೆ, ಈಗ ಅದು ಸಾಕಾರಗೊಂಡಿದೆ. ₹ 5 ಮುಖಬೆಲೆಯ ಒಂದು ಲಕ್ಷ ಅಂಚೆ ಚೀಟಿಗಳನ್ನು ಶ್ರೀಮಠದಿಂದ ಖರೀದಿಸಿ ಲೋಕಾರ್ಪಣೆಗೊಳಿಸಲಾಗುತ್ತಿದೆ.

ಹುಬ್ಬಳ್ಳಿ:

ಸಿದ್ಧಾರೂಢರ ಮಠದಲ್ಲಿ ಜು. 6ರಂದು ಸಂಜೆ 6 ಗಂಟೆಗೆ ಸಿದ್ಧಾರೂಢ ಸ್ವಾಮೀಜಿ ಭಾವಚಿತ್ರವಿರುವ ₹ 5 ಮೌಲ್ಯದ ಅಂಚೆ ಚೀಟಿ ಬಿಡುಗಡೆ ಲೋಕಾರ್ಪಣೆ ಮಾಡಲಾಗುವುದು ಎಂದು ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ಧಾರೂಢರ ಭಾವಚಿತ್ರ ಹೊಂದಿದ ಅಂಚೆಚೀಟಿ ಬಿಡುಗಡೆ ಮಾಡಬೇಕೆಂದು ಭಕ್ತರು, ಧರ್ಮದರ್ಶಿಗಳು ಪ್ರಯತ್ನಿಸಿದ್ದರು. ಆದರೆ, ಈಗ ಅದು ಸಾಕಾರಗೊಂಡಿದೆ. ₹ 5 ಮುಖಬೆಲೆಯ ಒಂದು ಲಕ್ಷ ಅಂಚೆ ಚೀಟಿಗಳನ್ನು ಶ್ರೀಮಠದಿಂದ ಖರೀದಿಸಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದರು.

ಅಂಚೆ ಚೀಟಿ ಬಿಡುಗಡೆ ಸಮಿತಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಮಾತನಾಡಿ, ಶ್ರೀಮಠದ ಟ್ರಸ್ಟ್‌ ಹಾಗೂ ನವದೆಹಲಿಯ ಕೇಂದ್ರ ಸರ್ಕಾರದ ಅಂವಹನ ಸಚಿವಾಲಯದ ಅಂಚೆ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದಭಾರತಿ ಶ್ರೀ, ಚಿಕ್ಕನಂದಿ ಸಿದ್ಧಾರೂಢ ದರ್ಶನ ಪೀಠದ ಸಹಜಯೋಗಿ ಸಹಜಾನಂದ ಶ್ರೀ, ಅಣ್ಣಿಗೇರಿ ದಾಸೋಹ ಪೀಠದ ಶಿವಕುಮಾರ ಶ್ರೀ ಸಾನ್ನಿಧ್ಯ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಂಚೆ ಚೀಟಿ ಬಿಡುಗಡೆಗೊಳಿಸುವರು. ವಲಯದ ಚೀಫ್‌ ಪೋಸ್ಟ್‌ ಮಾಸ್ಟರ್‌ ಎಸ್‌. ರಾಜೇಂದ್ರಕುಮಾರ ಅಂಚೆ ಚೀಟಿ ಪ್ರಸ್ತುತಪಡಿಸುವರು ಎಂದರು.

ಅತಿಥಿಗಳಾಗಿ ಕೇಂದ್ರದ ರಾಜ್ಯ ಖಾತೆ ಸಚಿವ ಶ್ರೀಪಾದ ನಾಯ್ಕ, ಸಂಸದರಾದ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಸಚಿವರಾ ಎಚ್‌.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಎಂ.ಆರ್‌. ಪಾಟೀಲ, ಎನ್‌.ಎಚ್‌. ಕೋನರಡ್ಡಿ, ವಿಪ ಸದಸ್ಯ ಪ್ರದೀಪ ಶೆಟ್ಟರ್‌, ಎಸ್‌.ವಿ. ಸಂಕನೂರ, ಮೇಯರ್‌ ರಾಮಣ್ಣ ಬಡಿಗೇರ, ಉಪಮೇಯರ್‌ ದುರ್ಗಮ್ಮ ಬಿಜವಾಡ ಸೇರಿದಂತೆ ಹಲವರು ಪಾಲ್ಗೊಳ್ಳುವರು ಎಂದರು.

ಈ ವೇಳೆ ಟ್ರಸ್ಟ್‌ ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಟ್ರಸ್ಟಿಗಳಾದ ರಮೇಶ ಬೆಳಗಾವಿ, ವಿನಾಯಕ ಘೋಡ್ಕೆ, ಗೀತಾ ಕಲಬುರ್ಗಿ, ಶಾಮಾನಂದ ಪೀಜೇರಿ, ವಸಂತ ಸಾಲಗಟ್ಟಿ, ವಿ.ವಿ. ಮಲ್ಲಾಪುರ, ಉದಯಕುಮಾರ ನಾಯ್ಕ ಸೇರಿದಂತೆ ಹಲವರಿದ್ದರು.