ಸಾರಾಂಶ
ಹಾವೇರಿ: ಪ್ರೊ.ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಚಳವಳಿಯ ೫೦ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಆ. ೭ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಂಜಯಗಾಂಧಿ ಸಂಜೀವಣ್ಣನವರ ಹೇಳಿದರು. ನಗರದ ಪ್ರತಿಭಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಬಿ. ಕೃಷ್ಣಪ್ಪನವರು ೧೯೭೪ರಲ್ಲಿ ದಲಿತ ಚಳವಳಿ ಸ್ಥಾಪಿಸುವ ಮೂಲಕ ಶೋಷಣೆಯ ವಿರುದ್ಧದ ಪ್ರತಿಭಟನಾ ಹೋರಾಟಕ್ಕೆ ನಾಂದಿ ಹಾಡಿದರು. ನೂರಾರು ತಳಸಮುದಾಯಗಳು ಬೀದಿಗೆ ಇಳಿದು ಹೋರಾಟ ಮಾಡುವ ಮೂಲಕ ಬಹಿರಂಗವಾಗಿ ಪ್ರತಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಈ ಮೂಲಕ ದಲಿತರಲ್ಲಿ ಜಾಗೃತಿ ಮೂಡಿಸಿದರು. ಅವರು ಸ್ಥಾಪಿಸಿದ ಕರ್ನಾಟಕ ದಲಿತ ಚಳವಳಿಗೆ ೫೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆ.೭ರಂದು ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ೫೦ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದ್ದು, ಇದರಲ್ಲಿ ಪ್ರಮುಖರಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪ ಅವರ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಹೊರಡಿಸಬೇಕು ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ನೀಡಿರುವ ವರದಿಯನ್ನು ಅಂಗೀಕಾರ ಮಾಡಿರುವ ರಾಜ್ಯ ಸರ್ಕಾರ ಆಂಧ್ರ ಮತ್ತು ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು. ೨೦೨೩-೨೪ ಹಾಗೂ ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿಗೆ ಮೀಸಲಿರಿಸಿರುವ ಹಣದಲ್ಲಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾದ ಒಟ್ಟು ೨೫ ಸಾವಿರ ಕೋಟಿ ರು. ಹಣವನ್ನು ವಾಪಸ್ ನೀಡಬೇಕು. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡಲಾಗುತ್ತಿರುವ ಪ್ರೋತ್ಸಾಹಧನಕ್ಕೆ ವಿಧಿಸಿರುವ ಆದಾಯ ಮತ್ತು ಅಂಕಗಳ ಮಿತಿಯನ್ನು ರದ್ದು ಪಡಿಸಬೇಕು. ಕರ್ನಾಟಕ ರಾಜ್ಯ ಅಲೆಮಾರಿ ಆಯೋಗ ರಚಿಸಬೇಕು. ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿವಾರು ಸಮೀಕ್ಷೆ ನಡೆಸಿರುವ ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸಿ ಅನುಷ್ಠಾನಗೊಳಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದರು. ಜಿಲ್ಲೆಯಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿವಾರೂ ಜನರು ಆಗಮಿಸಲಿದ್ದಾರೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುಮಂಗಲಾ ರಾರಾವಿ, ನಾಗರಾಜ ಕುಳೇನೂರ, ಆನಂದ ಮುರಡಪ್ಪನವರ, ರಮೇಶ ಮಾದಾಪುರ, ಪ್ರಕಾಶ ಮರಡೂರ ಇತರರು ಇದ್ದರು.