ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶರಣಬಸವ ವಿವಿ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನಾಚರಣೆಯನ್ನು, ರಾಜ್ಯೋತ್ಸವ ದಿನವಾದ ನ. 1ರಂದು ಇಡೀ ದಿನ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಸಮಾರಂಭಗಳನ್ನು ಸಂಘಟಿಸುವ ಮೂಲಕ ಧಾರ್ಮಿಕ ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶರಣಬಸವ ವಿವಿ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನಾಚರಣೆಯನ್ನು, ರಾಜ್ಯೋತ್ಸವ ದಿನವಾದ ನ. 1ರಂದು ಇಡೀ ದಿನ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಸಮಾರಂಭಗಳನ್ನು ಸಂಘಟಿಸುವ ಮೂಲಕ ಧಾರ್ಮಿಕ ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಗುತ್ತಿದೆ.ಈ ಕುರಿತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಪತ್ರಿಕಾ ಹೇಳಿಕೆ ನೀಡಿದ್ದು, ನ. 1 ರಂದು ಜನಿಸಿದ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ನ. 22 ರಂದು ಜನಿಸಿದ ಡಾ. ದಾಕ್ಷಾಯಣಿ ಅವ್ವಾಜಿಯವರ ಜನ್ಮದಿನವನ್ನು, ನ. 01 ರಂದೇ ಒಟ್ಟಾಗಿ ಹಾಗೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಂಘ ಮತ್ತು ಶರಣಬಸವೇಶ್ವರ ದೇವಾಲಯದ ಭಕ್ತರು ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ.ನ. 01 ರ ಬೆಳಗ್ಗೆ, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಮತ್ತು ಡಾ. ದಾಕ್ಷಾಯಣಿ ಅವ್ವಾಜಿ ಅವರ ಜನ್ಮದಿನದ ಅಂಗವಾಗಿ, ಶರಣಬಸವೇಶ್ವರ ದೇವಾಲಯದಲ್ಲಿ ಭಕ್ತರು ಲಿಂಗ ಪೂಜೆ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವರು.

ಮುಖ್ಯ ಸಮಾರಂಭ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿವಿ, ಅಖಿಲ ಭಾರತ ಶಿವಾನುಭವ ಮಂಟಪ, ಜಿಲ್ಲಾ ವೀರಶೈವ ಸಮಾಜ ಹಾಗೂ ಶರಣಬಸವೇಶ್ವರ ಸಂಸ್ಥಾನದ ಸಮಸ್ತ ಭಕ್ತಾದಿಗಳ ಸಂಯುಕ್ತಾಶ್ರಯದಲ್ಲಿ ಸಂಜೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ನಡೆಯಲಿದೆ.ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ. ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು ಜಂಟಿಯಾಗಿ ಜನ್ಮದಿನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಚೌಡಾಪುರಿ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು, ಮುಗಳನಾಗವಿಯ ಕಟ್ಟಿಮನಿ ಹಿರೇಮಠದ ಸಂಸ್ಥಾನದ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಉಪಸ್ಥಿತರಿರುವರು.ಶರಣಬಸವ ವಿವಿ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಬರೆದಿರುವ “ಪೂಜ್ಯ ಡಾ ಅವ್ವಾಜಿಯವರ ಚಿತ್ರಾತ್ಮಕ ಜೀವನ ಚರಿತ್ರೆ” ಪುಸ್ತಕ ಬಿಡುಗಡೆ ನಡೆಯಲಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿವಿ ಎಲ್ಲಾ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದ ಮತ್ತು ಪವಿತ್ರ ದೇಗುಲದ ಭಕ್ತರು, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರನ್ನು ಸನ್ಮಾನಿಸಿ ಗೌರವಿಸುವರು.ನ. 1ರಂದು ನಡೆಯಲಿರುವ ಸಮಾರಂಭದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಇಬ್ಬರಿಗೂ ಭಕ್ತರು ತುಲಾಭಾರ ಸಮರ್ಪಿಸುತ್ತಿರೋದು ವಿಶೇಷ. ಶರಣಬಸವ ವಿವಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆಯವರು ನಾಣ್ಯದಲ್ಲಿ, ಮಾಣಿಕಮ್ಮ ಹಾಗೂ ಮಡಿವಾಳಯ್ಯನವರು ಪವಿತ್ರ ರುದ್ರಾಕ್ಷಿಗಳೊಂದಿಗೆ ತುಲಾಭಾರ ಸಮರ್ಪಿಸಲಿರುವರು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.