ಸಾರಾಂಶ
ಹಿರಿಯರ ಪರಿಶ್ರಮ, ಈ ಪ್ರದೇಶದ ಶಿಕ್ಷಣ ಪ್ರೇಮಿಗಳ ಮುಂದಾಲೋಚನೆಯಿಂದ ೧೯೧೯ರಲ್ಲಿ ಆರಂಭಗೊಂಡ ತಾಲೂಕಿನ ಹಾಸಣಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ೧೦೩ ವರ್ಷಗಳ ಸುದೀರ್ಘ ಪಯಣವನ್ನು ಯಶಸ್ವಿಯಾಗಿ ಮುಗಿಸಿದೆ.
ಯಲ್ಲಾಪುರ:
ಹಿರಿಯರ ಪರಿಶ್ರಮ, ಈ ಪ್ರದೇಶದ ಶಿಕ್ಷಣ ಪ್ರೇಮಿಗಳ ಮುಂದಾಲೋಚನೆಯಿಂದ ೧೯೧೯ರಲ್ಲಿ ಆರಂಭಗೊಂಡ ತಾಲೂಕಿನ ಹಾಸಣಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ೧೦೩ ವರ್ಷಗಳ ಸುದೀರ್ಘ ಪಯಣವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಹಿನ್ನೆಲೆಯಲ್ಲಿ ಫೆ. ೨೬ರಂದು ಸಂಜೆ ೪ ಗಂಟೆಗೆ ಶಾಲಾ ಆವರಣದಲ್ಲಿ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ರಾಘವೇಂದ್ರ ಭಟ್ಟ ಹಾಸಣಗಿ ಹೇಳಿದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ₨ಞಅಸಷ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಶತಮಾನಗಳ ಹಿಂದೆಯೇ ಹಿರಿಯರು ಮಕ್ಕಳ ಶಿಕ್ಷಣಕ್ಕೆಂದು ಆರಂಭಗೊಳಿಸಿದ ಈ ಶಾಲೆಯಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿ, ವಿವಿಧ ಕ್ಷೇತ್ರಗಳ ಸಾಧಕರಾಗಿ ನಾಡಿನಾದ್ಯಂತ ಹೆಸರು ಗಳಿಸಿದ್ದಾರೆ. ಈ ಕಾರ್ಯಕ್ರಮದ ಇವರನ್ನು, ಶಿಕ್ಷಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.ಸಭಾಕಾರ್ಯಕ್ರಮದ ನಂತರ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸತೀಶ ಭಟ್ಟ ಮಾಳಕೊಪ್ಪ ಅವರ ಗಾಯನ ಮತ್ತು ನಿರಂಜನ ಹೆಗಡೆ ಕೊಳಲು ವಾದನ ಪ್ರಸ್ತುತಿಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಶತಮಾನೋತ್ಸವ ಸಮಾರಂಭದ ಸಂಚಾಲನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಶತಮಾನ ದಾಟಿರುವ ಶಾಲೆಯಲ್ಲಿ ಶಿಕ್ಷಣ ಪಡೆದ ಸಾಧಕರು ಅಸಂಖ್ಯಾತ. ಸೋಂದಾ ಸ್ವರ್ಣವಲ್ಲಿಯ ದೈವಾಧೀನ ಶ್ರೀಗಳಾಗಿದ್ದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮೀಜಿ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಎಂಬುದು ವಿಶೇಷ ಸಂಗತಿಯಾಗಿದ್ದರೆ, ತಾಲೂಕಿನಲ್ಲಿಯೇ ಆರಂಭಗೊಂಡ ಮೊದಲನೆಯ ಪ್ರಾಥಮಿಕ ಶಾಲೆ ಎಂಬುದು ಮತ್ತೊಂದು ವಿಶೇಷ. ಇಂತಹ ಸಂದರ್ಭದಲ್ಲಿ ಈ ಶಾಲೆಯಲ್ಲಿ ಕಲಿತು ದೇಶ-ವಿದೇಶಗಳಲ್ಲಿ ಸಾಧಕರಾಗಿ ಖ್ಯಾತಿ ಗಳಿಸಿದ ೧೦ ವ್ಯಕ್ತಿಗಳನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಗುವುದು. ಅಲ್ಲದೇ, ವಸಂತ ಭಟ್ಟರ ಸಂಪಾದಕತ್ವದಲ್ಲಿ ತೇಜೋನಿಧಿ ಸ್ಮರಣಸಂಚಿಕೆ ಹೊರತರಲಾಗುವುದು. ೪೦೦ ಪುಟ ಹೊಂದಿರುವ ಈ ಸಂಚಿಕೆಯಲ್ಲಿ ನಾಡಿನ ಖ್ಯಾತ ಲೇಖಕರ ಉಪಯುಕ್ತ ಬರಹಗಳಿವೆ ಎಂದು ವಿವರಿಸಿದರು.ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಉದಯ ಪೂಜಾರಿ, ಕಾರ್ಯದರ್ಶಿ ನವೀನ ಹೆಗಡೆ ಸುದ್ದಿಗೋಷ್ಟಿಯಲ್ಲಿದ್ದರು.