ನಾಳೆ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ

| Published : Dec 13 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಒಂದು ತಿಂಗಳ ಕಾಲ ನಡೆದ ಶ್ರೀ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ ಡಿ.14ರಂದು ಬೆಳಗ್ಗೆ 10.30ಕ್ಕೆ ನಗರದ ಸಾಯಿಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಒಂದು ತಿಂಗಳ ಕಾಲ ನಡೆದ ಶ್ರೀ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ ಡಿ.14ರಂದು ಬೆಳಗ್ಗೆ 10.30ಕ್ಕೆ ನಗರದ ಸಾಯಿಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ತಿಳಿಸಿದರು.

ನಗರದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಿಲ್ಲೆಯ ಮೂಲೆ ಮೂಲೆಯಿಂದ 20 ಸಾವಿರಕ್ಕೂ ಅಧಿಕ ಜನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಂದು ಸುಮಾರು 10 ಸಾವಿರ ಜನರಿಂದ ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕಗಳನ್ನು ಸಾಮೂಹಿಕ ಗೀತಾಪಠಣ ಏಕಕಾಲದಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯಮಟ್ಟದ ಅಭಿಯಾನ ನಡೆಯುತ್ತಿದೆ. ಎಲ್ಲರೂ ಶ್ರೀ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕು ಎಂದು ವಿನಂತಿಸಿದರು.

ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಬೇರೆ ಬೇರೆ ಶಾಲಾ ಕಾಲೇಜುಗಳಿಂದ, ವಿವಿಧೆಡೆಯಿಂದ ಆಗಮಿಸುವ 20 ಸಾವಿರ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸಾಯಿ ಗಾರ್ಡನ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಅಂದು ಬೆಳಗ್ಗೆಯೇ ಎಲ್ಲ ತಾಲೂಕುಗಳಿಂದ ಅಭಿಯಾನದ ಸ್ಥಳಕ್ಕೆ ಸರ್ಕಾರಿ ಬಸ್ ಸೌಲಭ್ಯ ಒದಗಿಸಲಾಗಿದೆ. ನಗರ ಕೇಂದ್ರ ಬಸ್ ನಿಲ್ದಾಣದಿಂದಲೂ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಾನ್ನಿಧ್ಯವನ್ನು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಮಾದಾರಚೆನ್ನಯ್ಯ ಗುರುಪೀಠದ ಜಗದ್ಗುರು ಬಸವಮೂರ್ತಿ ಮಾದಾರಚೆನ್ನಯ್ಯ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿಗಳು, ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ಪ್ರಮುಖರಾದ ಶ್ರೀಹರಿ ಗೊಳಸಂಗಿ, ಸಂಗನಗೌಡ ಪಾಟೀಲ, ಚಂದ್ರಶೇಖರ ಕವಟಗಿ, ವಿಜಯ ಜೋಶಿ, ವಿನೋದ ಮಣೂರ, ಪವನ, ಮಹೇಶ ದೇಶಪಾಂಡೆ, ವಿಕಾಸ ಉಪಸ್ಥಿತರಿದ್ದರು.

--------

ಬಾಕ್ಸ್‌.....

ಪಂಚಮಸಾಲಿ ಮೇಲೆ ಲಾಠಿ, ಕಾನೂನು ಸುವ್ಯವಸ್ಥೆ ವೈಫಲ್ಯ

ಬೆಳಗಾವಿಯಲ್ಲಿ ಪಂಚಮಸಾಲಿ 2ಎಗಾಗಿ ನಡೆಯುತ್ತಿದ್ದ ಶಾಂತಿಯುತ ಹೋರಾಟದ ಮೇಲೆ ಸರ್ಕಾರದಿಂದ ಮಹಾಪರಾಧ ನಡೆದಿದೆ. ಕಾನೂನು ಸುವ್ಯವಸ್ಥೆ ವೈಫಲ್ಯವಾಗಿದೆ ಎಂದು ವಿಪ ಮಾಜಿ ಸದಸ್ಯ ಅರುಣ ಶಹಾಪುರ ಆರೋಪಿಸಿದರು.

ತಮ್ಮ ಅವ್ಯವಸ್ಥೆ ಮುಚ್ಚಿಹಾಕಲು ಈ ರೀತಿ ನಡೆದುಕೊಂಡಿದ್ದಾರೆ. ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಅವರಿಗೆ ಅನ್ಯಾಯ ಮಾಡಿದ್ದಾರೆ. ಹೋರಾಟ ಮಾಡುತ್ತಿದ್ದವರ ಮೇಲೆ ದಬ್ಬಾಳಿಕೆ ಮಾಡಿದ್ದು ಖಂಡನೀಯ. ಅಧಿಕಾರ ಇಲ್ಲದಾಗ ಇದೇ ಸಿದ್ಧರಾಮಯ್ಯನವರು ಪ್ರಚೋದನೆ ನೀಡಿದ್ದಾರೆ. ಈಗ ಅಧಿಕಾರ ಇದ್ದಾಗ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಇವರು ಏನೇ ಮಾಡಿದರು 2ಎ ಮೀಸಲಾತಿ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಸ್ವತಃ ಪಂಚಮಸಾಲಿ ಗುರುಗಳ‌ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ಹಿಟ್ಲರ್‌ನನ್ನು ಮೀರಿಸಲಿರುವ ಸರ್ಕಾರ ಕಾಂಗ್ರೆಸ್ ಇದೆ. ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಆಗದಿದ್ದರೆ ಅಥವಾ ಮನವೊಲಿಸಲು ಆಗದಿದ್ದರೆ ಅಧಿಕಾರ ಬಿಟ್ಟುಕೊಡಿ, ಬೇರೆಯವರು ಅರ್ಹರು ಆ ಸ್ಥಾನಕ್ಕೆ ಬರುತ್ತಾರೆ ಎಂದರು.

ಆಡಳಿತ ಪಕ್ಷಕ್ಕೆ ಸದನ ನಡೆಸುವ ಜವಾಬ್ದಾರಿ ಇರುತ್ತದೆ. ಅನ್ಯಾಯವಾಗಿರುವ ಜನರ ಹೋರಾಟಕ್ಕೆ ಧ್ವನಿಯಾಗುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್‌ನವರು ಬೆನ್ನುಕೊಟ್ಟು ಓಡಿಹೋಗುವ ವ್ಯವಸ್ಥೆ ಮಾಡುತ್ತಿದ್ದು, ಅವರಿಗೆ ಆಡಳಿತ ನಡೆಸುವ ಲಕ್ಷಣವಿಲ್ಲ. ಮಾತುಕತೆಯ, ಮನವೊಲಿಸುವ ಕೆಲಸ ಮಾಡಿಲ್ಲ. ಪೊಲೀಸರ ಮುಖಾಂತರ ದಮನ ಮಾಡುತ್ತಿದ್ದು, ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.