ನಾಳೆ- ನಾಡಿದ್ದು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ

| Published : Oct 25 2024, 01:11 AM IST

ನಾಳೆ- ನಾಡಿದ್ದು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಅ.೨೬ರಂದು ಮಧ್ಯಾಹ್ನ ೨.೩೦ರಿಂದ ೪.೩೦ ಗಂಟೆಯವರೆಗೆ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಕಡ್ಡಾಯ ಕನ್ನಡ ಪರೀಕ್ಷೆಯು ಮಂಡ್ಯ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡ, ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾಜಿಪುರ ಸಭೆ) ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅರ್ಕೇಶ್ವರ ನಗರದಲ್ಲಿ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಅಕ್ಟೋಬರ್ ೨೬, ೨೭ರಂದು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿ ಪರೀಕ್ಷೆಯ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಅ.೨೬ರಂದು ಮಧ್ಯಾಹ್ನ ೨.೩೦ರಿಂದ ೪.೩೦ ಗಂಟೆಯವರೆಗೆ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಕಡ್ಡಾಯ ಕನ್ನಡ ಪರೀಕ್ಷೆಯು ಮಂಡ್ಯ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡ, ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾಜಿಪುರ ಸಭೆ) ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅರ್ಕೇಶ್ವರ ನಗರದಲ್ಲಿ ಒಟ್ಟು ೩ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು ೧೧೪೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ನುಡಿದರು.

ಅ.೨೭ ರಂದು ಬೆಳಗ್ಗೆ ೧೦.೩೦ ರಿಂದ ೧೨.೩೦ ಹಾಗೂ ಮಧ್ಯಾಹ್ನ ೨.೩೦ ರಿಂದ ೪.೩೦ ಗಂಟೆಯವರೆಗೆ ಎರಡು ಅಧಿವೇಶನಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ೧೦,೩೦೧ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಮಂಡ್ಯ -೧೨, ಕೃಷ್ಣರಾಜಪೇಟೆ-೨, ಮದ್ದೂರು-೩ ಮಳವಳ್ಳಿ -೨, ನಾಗಮಂಗಲ-೨, ಪಾಂಡವಪುರ-೧, ಶ್ರೀರಂಗಪಟ್ಟಣ - ೧ರಂತೆ ಮಂಡ್ಯ ಜಿಲ್ಲಾದ್ಯಂತ ಒಟ್ಟು ೨೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು. ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು. ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ವ್ಯಾಪ್ತಿಯಲ್ಲಿ ಸುತ್ತಮುತ್ತಲಿರುವ ಜೆರಾಕ್ಸ್ ಮತ್ತು ಸೈಬರ್ ಕೇಂದ್ರಗಳನ್ನು ಪರೀಕ್ಷಾ ಅವಯಲ್ಲಿ ಮುಚ್ಚುವಂತೆ ಆದೇಶ ಹೊರಡಿಸಲಾಗುವುದು ಎಂದರು.

ಪರೀಕ್ಷೆಗೆ ತಡವಾಗಿ ಬಂದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸುವಂತಿಲ್ಲ ಹಾಗೂ ಪರೀಕ್ಷೆ ನಡೆಯುವಾಗ ಅರ್ಧಕ್ಕೆ ಅಭ್ಯರ್ಥಿಗಳನ್ನು ಕೊಠಡಿಯಿಂದ ಹೊರಗೆ ಕಳುಹಿಸುವಂತಿಲ್ಲ ಎಂದರು.

ಪರೀಕ್ಷಾ ಪರಿವೀಕ್ಷಕರು ಎಚ್ಚರಿಕೆಯಿಂದ ಪ್ರಶ್ನೆಪತ್ರಿಕೆಯನ್ನು ನೋಡಿಕೊಳ್ಳಬೇಕು, ಪರೀಕ್ಷೆ ಪ್ರಾರಂಭವಾಗುವುದಕ್ಕೂಒಂದು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಕ್ರಮವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಪ್ರಶ್ನೆ ಪತ್ರಿಕೆಯ ಕವರ್ ತೆರೆದಿರುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಬೇಕು. ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ಪರೀಕ್ಷಾ ಮೇಲ್ವಿಚಾರಕರ ಮೇಲಿದೆ ಎಂದರು.

ಪರೀಕ್ಷಾ ದಿನದಂದು ಪರೀಕ್ಷೆಗೆ ಹಾಜರಾಗುವ ಮತ್ತು ಗೈರುಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಆನ್‌ಲೈನ್ ಮೂಲಕ ದಾಖಲಿಸುವಂತೆ ಪರೀಕ್ಷಾ ಕೇಂದ್ರಗಳ ಉಪಮುಖ್ಯ ಅಧೀಕ್ಷಕರು, ಪ್ರಾಂಶುಪಾಲರಿಗೆ ಸೂಚಿಸಿದರು.

ಅಭ್ಯರ್ಥಿಗಳು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಪೆನ್ ಡ್ರೈವ್ಗಳು, ಇಯರ್ ಫೋನ್ ಗಳು, ಮೈಕ್ರೋ ಫೋನ್‌ಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿ ಒಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ಸಲುವಾಗಿ ಫುಲ್ ಶರ್ಟ್, ಶೂ, ಟೋಪಿ ಧರಿಸುವುದನ್ನು ಬಾಯಿ, ಕಿವಿ ಹಾಗೂ ತಲೆಮುಚ್ಚುವ ವಸ್ತು, ಸಾಧನ ಧರಿಸುವುದನ್ನು ನಿಷೇಧಿಸಿದ್ದು, ಯಾವುದೇ ರೀತಿಯ ಮಾಸ್ಕ್ನ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಬರುವಂತಿಲ್ಲ. ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ ಸರ ಹಾಗೂ ಮೂಗುತಿಯನ್ನು ಹೊರತುಪಡಿಸಿ ಇನ್ನಾವುದೇ ಆಭರಣಗಳನ್ನು ಧರಿಸುವಂತಿಲ್ಲ ಎಂದರು.

ಕೆಇಎ ವತಿಯಿಂದ ನಡೆಸಲಾಗುವ ಸದರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಲೋಪ ದೋಷಗಳು ಉಂಟಾಗದ ರೀತಿಯಲ್ಲಿ ಬಹಳ ಎಚ್ಚರಿಕೆಯಿಂದ ಹಾಗೂ ಜಾಗೃತವಾಗಿ ಕರ್ತವ್ಯ ನಿರ್ವಹಿಸುವಂತೆ ಎಲ್ಲಾ ಅಧಿಕಾರಿಗಳಿಗೂ ಅಗತ್ಯ ಕ್ರಮ ವಹಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಚೆಲುವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರವಿಶಂಕರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೇಶವಮೂರ್ತಿ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರು ಉಪಸ್ಥಿತರಿದ್ದರು.