ಸಾರಾಂಶ
- ಟಿ.ಎನ್.ಸೀತಾರಾಂ, ಶ್ರೀನಿವಾಸ ಕಪ್ಪಣ್ಣ, ಕೆ.ವಿ.ನಾಗರಾಜ ಮೂರ್ತಿ ಸಂವಾದ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರತಿಮಾ ಸಭಾದಿಂದ ಹೊಸ ಸಂವತ್ಸರ ವಿಶ್ವಾವಸು ಹಾಗೂ ಹೊಸ ವರ್ಷ ಯುಗಾದಿಗೆ ಸ್ವಾಗತ ಕೋರುವ ವಿನೂತನ ಸಂವಾದ ಮತ್ತು ಹಾಸ್ಯ ನಾಟಕವನ್ನು ಮಾ.29ರಂದು ನಗರದ ಜೆಜೆಎಂ ವೈದ್ಯಕೀಯ ಕಾಲೇಜು ಆವರಣದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಭಾದ ಅಧ್ಯಕ್ಷ ಬಾ.ಮ. ಬಸವರಾಜಯ್ಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪ್ರತಿಮಾ ಸಭಾ ಗೌರವಾಧ್ಯಕ್ಷ ಪ್ರೊ. ಎಸ್.ಹಾಲಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಾ.ಮ. ಬಸವರಾಜಯ್ಯ ಪ್ರಸ್ತಾವಿಕವಾಗಿ ಮಾತನಾಡುವರು. ಬಿ.ಎನ್.ಮಲ್ಲೇಶ ಪ್ರತಿಮಾ ಸಭಾದ ಅಗಲಿದ ಗಣ್ಯರ ಸ್ಮರಣೆ, ಖಜಾಂಚಿ ಸಂಪನ್ನ ಮುತಾಲಿಕ್ ಅತಿಥಿಗಳ ಪರಿಚಯ ಮಾಡಿಕೊಡುವರು ಎಂದರು.ಕಿರುತೆರೆ, ಬೆಳ್ಳಿತೆರೆ ನಟ, ನಿರ್ದೇಶಕ ಟಿ.ಎನ್. ಸೀತಾರಾಮ್, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ ಜೆ.ಕಪ್ಪಣ್ಣ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ, ರಂಗಭೂಮಿ, ಕಿರುತೆರೆ ನಟ ಕೆ.ವಿ.ನಾಗರಾಜ ಮೂರ್ತಿ ಸಂವಾದದಲ್ಲಿ ಭಾಗವಹಿಸುವರು. ಟಿ.ಎನ್. ಸೀತಾರಾಮ್ ಪ್ರಸ್ತುತ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು ವಿಷಯವಾಗಿ ಮಾತನಾಡಿ, ಪ್ರೇಕ್ಷಕರೊಂದಿಗೆ ಸೀಮಿತವಾಗಿ ಸಂವಾದವನ್ನೂ ನಡೆಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಲ್ಲೇಶ ಮಾತನಾಡಿ, ನಮ್ಮ ಜಾನಪದ ಕಲೆಯ ಇಂದಿನ ಸ್ಥಿತಿಗತಿ ವಿಷಯವಾಗಿ ಶ್ರೀನಿವಾಸ ಕಪ್ಪಣ್ ಸಂವಾದ ನಡೆಸಿಕೊಡುವರು. ಕೆ.ವಿ.ನಾಗರಾಜ ಮೂರ್ತಿ ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿ ಒಲವು ನಿಲುವುಗಳು ವಿಷಯವಾಗಿ ಮಾತನಾಡಿ, ಸಂವಾದ ನಡೆಸಿಕೊಡಲಿದ್ದಾರೆ. ಅದೇ ಸಂಜೆ 5.30ಕ್ಕೆ ಕಿರುತೆರೆ ನಟ ಸುನೇತ್ರ ಪಂಡಿತ್ ನಿರ್ದೇಶನದ ಎಲ್‌ಎಸ್‌ಡಿ ನಗೆನಾಟಕ ಪ್ರದರ್ಶನಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡುವರು ಎಂದು ತಿಳಿಸಿದರು.ಹಿರಿಯ ವೈದ್ಯರಾದ ಡಾ.ಮುರುಗೇಶ ಬಾಬು, ಡಾ.ಅನುರಾಧ ಬಕ್ಕಪ್ಪ, ಡಾ.ಶೃತಿ ರಾಜ್, ಬಿ.ಟಿ.ಜಾಹ್ನವಿ ತಂಡದವರಿಂದ ಧಾರವಾಹಿ, ಜಾನಪದ ಹಾಗೂ ರಂಗಗೀತೆಗಳ ಗಾಯನವಿರುತ್ತದೆ. ಪ್ರತಿಮಾ ಸಭಾದಿಂದ ಮತ್ತೆ ಚಟುವಟಿಕೆಗಳನ್ನು ಚುರುಕುಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಮಾ.29ರಂದು ಇಡೀ ದಿನದ ಕಾರ್ಯಕ್ರಮಕ್ಕೆ ಉಚಿತ ಪ್ರವೇಶಾವಕಾಶವಿದೆ. ಹೊಸ ವರ್ಷಕ್ಕೆ ಸ್ವಾಗತ ಕೋರುವ ಕಾರ್ಯಕ್ರಮಕ್ಕೆ ರಂಗಾಸಕ್ತರು, ಪ್ರೇಕ್ಷಕರು ಸರಿಯಾದ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪ್ರತಿಮಾ ಸಭಾದ ಎಸ್.ಎಸ್.ಸಿದ್ದರಾಜು, ಟಿ.ಶೈಲಜಾ, ಡಾ.ಮುರುಗೇಶ ಬಾಬು ಇದ್ದರು.- - -
-29ಕೆಡಿವಿಜಿ2:ದಾವಣಗೆರೆಯಲ್ಲಿ ಗುರುವಾರ ಪ್ರತಿಮಾ ಸಭಾ ಅಧ್ಯಕ್ಷ ಬಾ.ಮ. ಬಸವರಾಜಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಲ್ಲೇಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.