ಸಾರಾಂಶ
ಹಾವೇರಿ: ಮಾದಿಗ ಸಮುದಾಯದ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಇದನ್ನು ಖಂಡಿಸಿ ಸೆ.೧೯ರಂದು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹಲಗೆ, ತಮಟೆ ಬಾರಿಸುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮಾಜದ ಮುಖಂಡ, ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಹೇಳಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮಾಜದ ಪ್ರಮುಖ ಬೇಡಿಕೆಯಾಗಿದ್ದ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಿ ಒಳ ಮೀಸಲಾತಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ತಮ್ಮ ಮಾತಿಗೆ ಬದ್ಧರಾಗಿಲ್ಲ. ಅಲ್ಲದೆ ದಲಿತ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಅನ್ಯಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾದಿಗ ಸಮುದಾಯದ ಒಳಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಈ ಕುರಿತು ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಸುಪ್ರೀಂ ಕೋರ್ಟ್‌ನ ೭ ಸದಸ್ಯರ ಪೀಠ ಪರಿಶೀಲನೆ ನಡೆಸಿ, ಒಳಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ಕೆಲಸ ಎಂದು ಆದೇಶಿಸಿದೆ. ಈ ಆದೇಶ ನೀಡಿ ಒಂದು ತಿಂಗಳು ಗತಿಸಿದರೂ ಸಿಎಂ ಸಿದ್ಧರಾಮಯ್ಯ ಯಾವುದೇ ಕ್ರಮ ಜರುಗಿಸದೇ ಮೌನವಾಗಿದ್ದಾರೆ. ಕಾರಣ ಸಿದ್ದರಾಮಯ್ಯ ಸರ್ಕಾರ ಗಾಢ ನಿದ್ದೆಯಲ್ಲಿದ್ದು, ಅವರನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಹಲಗೆ ಮತ್ತು ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು. ಆಂಧ್ರ‍್ರಪ್ರದೇಶದಲ್ಲಿ ಈಗಾಗಲೇ ಜಾರಿ ಮಾಡಿರುವ ಮಾದರಿಯಲ್ಲಿ ಜನಸಂಖ್ಯೆ ಆಧರಿಸಿ ಶೇ.೧೫ರಷ್ಟು ಮೀಸಲಾತಿ ಕಲ್ಪಿಸಬೇಕು. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಎ.ಜೆ.ಸದಾಶಿವ ಆಯೋಗ ರಚನೆ ಮಾಡಿ ಅದಕ್ಕೆ ೧೪ಕೋಟಿ ರು. ಅನುದಾನ ನೀಡಿದ್ದರು. ಆದರೆ ನಂತರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಪ್ರಗತಿ ತೋರಿಸುತ್ತಿಲ್ಲ. ಈಗಾಗಲೇ ರಾಜ್ಯದ ಪ್ರತಿ ವಿಧನಸಭಾ ಕ್ಷೇತ್ರದಲ್ಲಿ ಸುಮಾರು ೩೦ ಸಾವಿರಷ್ಟು ಜನಸಂಖ್ಯೆ ಹೊಂದಿರುವ ಮಾದಿಗ, ಸಮಗಾರ, ಡೋಹರ ಮತ್ತು ಮಚಗಾರ ಸಮಾಜದ ಬೇಡಿಕೆಗಳನ್ನು ಪರಿಗಣಿಸಿ ಆಯೋಗದ ವರದಿಯನ್ನು ಯತಾವಥ್ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಸಮಾಜದ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಮಲ್ಲೇಶಪ್ಪ ಹರಿಜನ, ಅಶೋಕ ಮರೆಣ್ಣನವರ, ಉಡಚಪ್ಪ ಮಾಳಗಿ, ಸುಭಾಸ ಬೆಂಗಳೂರು, ಹೊನ್ನಪ್ಪ ತಗಡಿನಮನಿ, ನಾಗರಾಜ ಮಾಳಗಿ, ಕರಿಯಪ್ಪ ಕಟ್ಟೀಮನಿ ಸೇರಿದಂತೆ ಇತರರು ಇದ್ದರು.