ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ನಡೆದಾಡುವ ವಿಶ್ವವಿದ್ಯಾಲಯದಂತಿದ್ದರು-ಶಾಸಕ ಸಿಸಿಪಾ

| Published : Feb 22 2025, 12:47 AM IST

ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ನಡೆದಾಡುವ ವಿಶ್ವವಿದ್ಯಾಲಯದಂತಿದ್ದರು-ಶಾಸಕ ಸಿಸಿಪಾ
Share this Article
  • FB
  • TW
  • Linkdin
  • Email

ಸಾರಾಂಶ

ತೋಂಟದಾರ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ನಡೆದಾಡುವ ವಿಶ್ವವಿದ್ಯಾಲಯ ಆಗಿದ್ದರು. ಒಮ್ಮೆ ಅವರೊಂದಿಗೆ ಮಾತನಾಡಿದರೆ ಹತ್ತು ಪುಸ್ತಕ ಓದಿದಷ್ಟು ಜ್ಞಾನ ಸಿಗುತ್ತಿತ್ತು ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಭಾವಪೂರ್ಣವಾಗಿ ಸ್ಮರಿಸಿದರು.

ಗದಗ: ತೋಂಟದಾರ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ನಡೆದಾಡುವ ವಿಶ್ವವಿದ್ಯಾಲಯ ಆಗಿದ್ದರು. ಒಮ್ಮೆ ಅವರೊಂದಿಗೆ ಮಾತನಾಡಿದರೆ ಹತ್ತು ಪುಸ್ತಕ ಓದಿದಷ್ಟು ಜ್ಞಾನ ಸಿಗುತ್ತಿತ್ತು ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಭಾವಪೂರ್ಣವಾಗಿ ಸ್ಮರಿಸಿದರು.

ಶುಕ್ರವಾರ ಇಲ್ಲಿನ ತೋಂಟದಾರ್ಯ ಮಠದಲ್ಲಿ ನಡೆದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ 76ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ ಹಾಗೂ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗೈಕ್ಯ ಶ್ರೀಗಳ ಪುಸ್ತಕ ಪ್ರೀತಿ ಎಲ್ಲರಿಗೂ ಮಾದರಿ. ಶ್ರೀಮಠಕ್ಕೆ ಯಾರೇ ಬಂದರೂ ಕಲ್ಲು ಸಕ್ಕರೆಯೊಂದಿಗೆ ನಾಲ್ಕಾರು ಪುಸ್ತಕಗಳನ್ನು ಕೊಟ್ಟು ಓದಿ ಎಂದು ಹೇಳುತ್ತಿದ್ದರು. ಅವರ ಪ್ರೇರಣೆಯಿಂದಲೇ ತೋಂಟದಾರ್ಯ ಮಠವು ಯಾವುದೇ ಒಂದು ವಿಶ್ವವಿದ್ಯಾಲಯಕ್ಕೆ ಕಡಿಮೆ ಇಲ್ಲದಂತೆ ಪುಸ್ತಕಗಳನ್ನು ಪ್ರಕಟಿಸಿದೆ, ಇದು ನಮ್ಮ ನಾಡಿಗೆ ಬಹುದೊಡ್ಡ ಆಸ್ತಿಯಾಗಿದೆ. ನಾನು ಶ್ರೀಗಳೊಂದಿಗೆ ಬೇರೆ ಬೇರೆ ವಿಷಯಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರ ತಾಯಿ ಪ್ರೀತಿ ಮಾತ್ರ ಬಹು ದೊಡ್ಡದು ಎಂದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಖ್ಯಾತ ವೈದ್ಯ ಡಾ. ಸೋಲೋಮನ್, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಮಾಜಿ ಸಂಸದ ಐ.ಜಿ .ಸನದಿ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಸಿದ್ದರಾಮ ಶ್ರೀಗಳು ವಹಿಸಿದ್ದರು. ಮಲ್ಲಿಕಾರ್ಜುನ ಶ್ರೀಗಳು, ತೋಂಟದ ನಿಜಗುಣಪ್ರಭು ಶ್ರೀಗಳು, ಸೋಮೇಶ್ವರ ಶ್ರೀಗಳು, ನುಲಿಯ ಚಂದಯ್ಯ ಶ್ರೀಗಳು, ಮಹಾಂತೇಶ್ವರ ದೇವರು, ಗುತ್ತಲದ ಶ್ರೀಗಳು, ಸಭಾಪತಿ ಬಸವರಾಜ ಹೊರಟ್ಟಿ, ರೋಣ ಶಾಸಕ ಜಿ.ಎಸ್.ಪಾಟೀಲ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಭೀಮವ್ವ ಶಿಳ್ಳಿಕ್ಯಾತರ, ಸಾಹಿತಿ ರಂಜಾನ್ ದರ್ಗಾ, ಭೋಜರಾಜ ಪೊಪರಿಮಠ, ರಾಜು ಕುರಡಗಿ, ಕ್ಯಾ. ಮಹೇಶ್ ಮಾಲಗಿತ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಭಾವೈಕ್ಯತಾ ಯಾತ್ರೆ:ಶ್ರೀಗಳ 76ನೇ ಜಯಂತಿ ಅಂಗವಾಗಿ ಶುಕ್ರವಾರ ಬೆಳಗ್ಗೆ ನಗರದ ಭೀಷ್ಮಕೆರೆ ಆವರಣದಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಯಿಂದ ತೋಂಟದಾರ್ಯ ಮಠದ ಆವರಣದವರೆಗೂ ಭಾವೈಕ್ಯತೆ ಯಾತ್ರೆ ನಡೆಯಿತು. ಈ ಯಾತ್ರೆಗೆ ಮಾಜಿ ಶಾಸಕ ಡಿ.ಆರ್. ಪಾಟೀಲ ಚಾಲನೆ ನೀಡಿದರು. ತೋಂಟದ ಡಾ. ಸಿದ್ದರಾಮ ಸ್ವಾಮೀಜಿಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಶ್ರೀ ಮಠದ ಭಕ್ತರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.