ತೋಂಟದಾರ್ಯ ಶಿಕ್ಷಣ ಸಂಸ್ಥೆಗಳು ಗ್ರಾಮೀಣ, ಬಡವರ ವರದಾನ: ಎಸ್.ಎಸ್. ಪಟ್ಟಣಶೆಟ್ಟರ

| Published : Sep 10 2024, 01:31 AM IST

ತೋಂಟದಾರ್ಯ ಶಿಕ್ಷಣ ಸಂಸ್ಥೆಗಳು ಗ್ರಾಮೀಣ, ಬಡವರ ವರದಾನ: ಎಸ್.ಎಸ್. ಪಟ್ಟಣಶೆಟ್ಟರ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉನ್ನತ ಶಿಕ್ಷಣ ಅದರಲ್ಲೂ ಐಟಿಐನಂಥ ವೃತ್ತಿಪರ ತಾಂತ್ರಿಕ ಮಹಾವಿದ್ಯಾಲಯಗಳು ಸ್ಥಾಪನೆಯಾಗಬೇಕು ಎಂಬುದು ಲಿಂಗೈಕ್ಯ ಗುರುಗಳ ಕನಸಾಗಿತ್ತು ಎಂದು ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.

ಗದಗ: ಕನ್ನಡದ ಕುಲಗುರುಗಳು ಹಾಗೂ ಕೋಮು ಸೌಹಾರ್ದ ಹರಿಕಾರರಾಗಿದ್ದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರಲ್ಲಿ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಶ್ರೀಮಠದಿಂದ ನಡೆಯುತ್ತಿವೆ. ಇದರಿಂದಾಗಿ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಇದಕ್ಕೆಲ್ಲ ಲಿಂಗೈಕ್ಯ ಗುರುಗಳ ಪ್ರೇರಣೆ ಹಾಗೂ ಮಾರ್ಗದರ್ಶನ ಕಾರಣ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ತೋಂಟದಾರ್ಯ ಮಠದಲ್ಲಿ ಜರುಗಿದ 2709ನೇ ಶಿವಾನುಭವ ಕಾರ್ಯಕ್ರಮದಲ್ಲಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿಕ್ಷಣ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉನ್ನತ ಶಿಕ್ಷಣ ಅದರಲ್ಲೂ ಐಟಿಐನಂಥ ವೃತ್ತಿಪರ ತಾಂತ್ರಿಕ ಮಹಾವಿದ್ಯಾಲಯಗಳು ಸ್ಥಾಪನೆಯಾಗಬೇಕು ಎಂಬುದು ಲಿಂಗೈಕ್ಯ ಗುರುಗಳ ಕನಸಾಗಿತ್ತು. ಸದ್ಯ ತೋಂಟದಾರ್ಯ ಮಠದಿಂದ ಅನೇಕ ಐಟಿಐ ಕಾಲೇಜುಗಳು ನಡೆಯುತ್ತಿದ್ದು, ಸಾವಿರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟಿವೆ. ಕಾಲದ ಅಗತ್ಯಕ್ಕೆ ತಕ್ಕಹಾಗೆ ಲಿಂಗೈಕ್ಯ ಗುರುಗಳ ಪ್ರಭಾವವನ್ನು ಬಳಸಿಕೊಂಡು ತೋಂಟದಾರ್ಯ ವಿದ್ಯಾಪೀಠದಿಂದ ಡಿಪ್ಲೋಮಾ, ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿಪೂರ್ವ, ಪದವಿ ಮಹಾವಿದ್ಯಾಲಯಗಳು, ಎಂಜೀನಿಯರಿಂಗ್, ಆಯುರ್ವೇದಿಕ್, ಶಿಕ್ಷಣ ಮಹಾವಿದ್ಯಾಲಯಗಳು, ಸಿ.ಬಿ.ಎಸ್.ಸಿ ವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಯಿತು. ನಮ್ಮ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಬಸವಾದಿ ಶರಣರ ಅಥವಾ ನಾಡಿಗೆ ಅದ್ವಿತೀಯ ಕೊಡುಗೆ ನೀಡಿದ ಪುಣ್ಯಪುರುಷರ ಹೆಸರನ್ನೇ ನಾಮಕರಣ ಮಾಡಲು ಶ್ರೀಗಳು ಆದೇಶಿಸುತ್ತಿದ್ದರೇ ವಿನ: ತಮ್ಮ ಹೆಸರನ್ನು ನಾಮಕರಣ ಮಾಡುವ ನಮ್ಮ ಕೋರಿಕೆಗೆ ಎಂದಿಗೂ ಒಪ್ಪಿಗೆ ನೀಡುತ್ತಿರಲಿಲ್ಲ ಎಂದು ಶ್ರೀಗಳ ಶೈಕ್ಷಣಿಕ ಪ್ರೀತಿಯ ಕುರಿತು ಸುಧೀರ್ಘವಾಗಿ ತಿಳಿಸಿದರು.

ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ನಡೆದ ವಚನಾನುಭಾವ ಕುರಿತು ಗಿರಿಜಕ್ಕ ಧರ್ಮರಡ್ಡಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಶ್ರದ್ದಾ ಹೂಲಿ ಧರ್ಮ ಗ್ರಂಥ ಪಠಣ, ಶ್ರೇಯಾ ಜಾಲಿಹಾಳ ವಚನ ಚಿಂತನ ನಡೆಸಿದರು. ವಿದ್ಯಾವತಿ ಪ್ರಭು ಗಂಜಿಹಾಳ ಸ್ವಾಗತಿಸಿದರು. ಐ.ಬಿ. ಬೆನಕೊಪ್ಪ ನಿರೂಪಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಉಪಸ್ಥಿತರಿದ್ದರು.