ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಇತ್ತೀಚೆಗೆ ಪತ್ತೆಯಾದ ಅಸ್ಥಿಪಂಜರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಹಲ್ಲು ಸೆಟ್‌ನಿಂದ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಕೊತ್ತನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊತ್ತನೂರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಇತ್ತೀಚೆಗೆ ಪತ್ತೆಯಾದ ಅಸ್ಥಿಪಂಜರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಘಟನಾ ಸ್ಥಳದಲ್ಲಿ ಸಿಕ್ಕ ಹಲ್ಲು ಸೆಟ್‌ನಿಂದ ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಕೊತ್ತನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಆವಲಹಳ್ಳಿಯ ಸೋಮಯ್ಯ(69) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊತ್ತನೂರಿನ ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮೀಪ ಹತ್ತು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿರುವ ಕಟ್ಟಡದಲ್ಲಿ ಅ.4ರಂದು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಬಗ್ಗೆ ಕಾರ್ಮಿಕರು ನೀಡಿದ ಮಾಹಿತಿ ಮೇರೆಗೆ ಕೊತ್ತನೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಅಸ್ಥಿಪಂಜರ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಅಸ್ಥಿಪಂಜರ ಸಿಕ್ಕ ಸ್ಥಳದಲ್ಲಿ ಹಲ್ಲು ಸೆಟ್‌ವೊಂದು ಪತ್ತೆಯಾಗಿದ್ದು, 2020-21ನೇ ಸಾಲಿನಲ್ಲಿ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯದು ಎಂಬುದು ದಾಖಲೆಗಳಿಂದ ದೃಢಪಟ್ಟಿತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದರು.

ಸ್ಥಳದಲ್ಲಿ ಟೀ ಶರ್ಟ್‌, ಚಪ್ಪಲಿ ಸಹ ಪತ್ತೆ:

ನಾಪತ್ತೆ ಪ್ರಕರಣಗಳ ಪರಿಶೀಲನೆ ವೇಳೆ 2023ನೇ ಸಾಲಿನಲ್ಲಿ ಸೋಮಯ್ಯ ಎಂಬುವವರು ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ಕಿರಣ್‌ ಕುಮಾರ್‌ ಆವಲಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲಿ ಸ್ಟೈಲ್‌ ಯೂನಿಯನ್‌ ಬ್ರಾಂಡ್‌ ಟೀ ಶರ್ಟ್‌ ಮತ್ತು ಪ್ಯಾರಾಗಾನ್‌ ಚಪ್ಪಲಿ ಸಹ ಸಿಕ್ಕಿದ್ದವು. ಸೋಮಯ್ಯ ನಾಪತ್ತೆ ವೇಳೆ ಧರಿಸಿದ್ದ ಉಡುಪುಗಳು ಇದೇ ಮಾದರಿಯಾಗಿದ್ದವು. ಈ ಬಗ್ಗೆ ಅನುಮಾನಗೊಂಡು ದೂರುದಾರ ಕಿರಣ್‌ ಕುಮಾರ್‌ ಅವರನ್ನು ಕರೆಸಿ ವಸ್ತುಗಳನ್ನು ತೋರಿಸಿದಾಗ ಅವು ತಮ್ಮ ತಂದೆ ಸೋಮಯ್ಯ ಅವರದೇ ಎಂದು ಖಚಿತಪಡಿಸಿದ್ದಾರೆ. ಬಳಿಕ ಪೊಲೀಸರು ಸೋಮಯ್ಯ ಅವರ ಅಸ್ಥಿಪಂಜರವನ್ನು ಪುತ್ರ ಕಿರಣ್‌ ಕುಮಾರ್‌ಗೆ ಒಪ್ಪಿಸಿದ್ದಾರೆ.

ಸಾವಿನ ಕಾರಣ ನಿಗೂಢ

ಅಸ್ಥಿಪಂಜರ ಸೋಮಯ್ಯ ಅವರದು ಎಂಬುದು ಪತ್ತೆಯಾಗಿದೆ. ಅವರ ಸಾವಿನ ಕಾರಣ ನಿಗೂಢವಾಗಿದೆ. ಅವರು ನಿರ್ಮಾಣ ಹಂತದ ಕಟ್ಟಡದೊಳಗೆ ಏಕೆ ಬಂದರು? ಹೇಗೆ ಮೃತಪಟ್ಟರು ಎಂಬುದನ್ನು ಕಂಡುಕೊಳ್ಳಲು ಕೊತ್ತನೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.