ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ:ಕನ್ನಡ ಸಿಹಿಯಾದ ಭಾಷೆ, ಇದಕ್ಕೆ ಅಗ್ರಸ್ಥಾನ ಇದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ 13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ತೆಲುಗು, ಮರಾಠಿ, ತಮಿಳು ಭಾಷಿಕರು ಇದ್ದರೂ ಸಹ ನಮ್ಮ ಸಿಹಿಯಾದ ಭಾಷೆ ಕನ್ನಡ, ಇದಕ್ಕೆ ಎಲ್ಲರೂ ಅಗ್ರಸ್ಥಾನ ನೀಡಬೇಕು. ಕನ್ನಡಿಗರಾದ ನಾವು ಭಾಷೆಗೆ ಧಕ್ಕೆ ತರಬಾರದು ಎಂದರು.
ಈ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಅಮೆರಿಕೆಗೆ ತೆರಳಿ, ಅಲ್ಲಿ ಕನ್ನಡ ಸಮ್ಮೇಳನದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಜತೆ ಭಾಗವಹಿಸಿದ್ದೆ. ಅದು ನನಗೆ ಖುಷಿ ತಂದಿತ್ತು. ಈಗ ಗಂಗಾವತಿ ಕ್ಷೇತ್ರದಲ್ಲಿ ಇಂತಹ ಸಮ್ಮೇಳನದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಧಾರವಾಡದಲ್ಲಿ ಸಾಹಿತಿ ಚೆನ್ನವೀರ ಕಣವಿ ಅವರ ಸಮ್ಮುಖದಲ್ಲಿ ಸಾಹಿತ್ಯ ಭವನ ಉದ್ಘಾಟಿಸಿದ್ದನ್ನು ನೆನಪಿಸಿಕೊಂಡರು.
ಗಂಗಾವತಿ ಜನತೆ ಈ ಹಿಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದರು. ಅದು ರಾಜ್ಯಕ್ಕೆ ಮಾದರಿ ಸಮ್ಮೇಳನವಾಗಿತ್ತು. ಈಗಲೂ ಅಚ್ಚುಕಟ್ಟಾದ ಸಮ್ಮೇಳನ ನಡೆದಿದೆ. ಸಾಹಿತ್ಯ ಪರಿಷತ್‌ಗೆ ಕನ್ನಡಿಗರು ಬೆಂಬಲಿಸಿರುವುದು ಶ್ಲಾಘನೀಯ ಎಂದರು.ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶವಾದ ಮೇಲೆ 371 ಕಲಂ ಜಾರಿಗೆ ಬಂದಿತು. ಅಂದಿನಿಂದ ಈ ಭಾಗಕ್ಕೆ ಪ್ರಾಶಸ್ತ್ಯ ದೊರೆತಿದೆ ಎಂದರು. ಸರ್ಕಾರಗಳು ಆಂಗ್ಲ ಶಾಲೆಗಳಿಗೆ ಆದ್ಯತೆ ನೀಡುತ್ತಿವೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ನಗರದಲ್ಲಿ 2011ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿತ್ತು. ಇಲ್ಲಿಯ ಜನರು ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದರು ಎಂದು ಮೆಲಕು ಹಾಕಿದರು. ಜಲ, ನೆಲ, ಭಾಷೆ ಗಡಿ ವಿವಾದ ಬಂದರೆ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಮಾಜಿ ಶಾಸಕ ಜಿ. ವೀರಪ್ಪ, ನಗರಸಭೆ ಅಧ್ಯಕ್ಷ ಮೌಲಾಸಾಬ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಕಸಾಪ ರಾಜ್ಯ ಪ್ರತಿನಿಧಿ ನಬಿಸಾಬ, ಸಹಕಾರಿ ಮಹಾಮಂಡಳಿ ಅದ್ಯಕ್ಷ ಶೇಖರಗೌಡ ಮಾಲೀಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್, ತಾಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರಾಳ, ನಗರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ದುರಗೇಶ ದೊಡ್ಮನಿ, ರುಕ್ಮಿಣಿಬಾಯಿ ಚಿತ್ರಗಾರ, ಸಿ. ಮಹಾಲಕ್ಷ್ಮೀ, ಶ್ರೀದೇವಿ ಕೃಷ್ಣಪ್ಪ, ನಾಗರತ್ನಾ ಎಚ್., ತಹಸೀಲ್ದಾರ್ ನಾಗರಾಜ್, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಶರಣಬಸವನಗೌಡ ಪಾಟೀಲ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಮನೋಹರಗೌಡ ಹೇರೂರು, ಕಾಶೀನಾಥ ಚಿತ್ರಗಾರ ಉಪಸ್ಥಿತರಿದ್ದರು. ಸಾವಿತ್ರಿಬಾಯಿ ಪುಲೆ ಮತ್ತು ಸಂಸ್ಕೃತಿ ಶಿಕ್ಷಕರಿಯರ ಕಲಾಬಳಗದಿಂದ ನಾಡಗೀತೆ, ಸಾಹಿತ್ಯ ಸಿರಿ ಕಲಾಬಳಗದಿಂದ ರೈತಗೀತೆ ಪ್ರಸ್ತುತ ಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಸ್ವಾಗತಿಸಿದರು. ಶೇಖರಗೌಡ ಮಾಲೀಪಾಟಿಲ್ ಆಶಯ ನುಡಿ ಆಡಿದರು. ಶಿವಾನಂದ ತಿಮ್ಮಾಪುರ ಮತ್ತು ರಮೇಶ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಜಯರಾಮ ವಂದಿಸಿದರು.