ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ 13 ಹಳ್ಳಿಗಳ ರೈತರ ಅಹವಾಲನ್ನು ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಪರಿಗಣಿಸಿಲ್ಲ ಎಂದು ಕಳೆದ 75 ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರು ಶುಕ್ರವಾರ ಅಂಬೇಡ್ಕರ್ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿ ಗಮನ ಸೆಳೆದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿಡ್ಲಘಟ್ಟ ತಾಲೂಕು ಸಂಚಾಲಕ ರಾಮಾಂಜಿ ಮಾತನಾಡಿ ಜಿಲ್ಲೆಯ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ನೂರಾರು ರೈತರು ಕೆಐಎಡಿಬಿಗೆ ಕೈಗಾರಿಕೆ ಸ್ಥಾಪಿಸಲು ಭೂಮಿಕೊಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದರೂ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಈ ವಿಚಾರದಲ್ಲಿ ಕ್ಷಿಪ್ರಗತಿಯಲ್ಲಿ ಏನನ್ನೂ ಮಾಡುತ್ತಿಲ್ಲ. ಬದಲಿಗೆ ಭೂಮಿ ಕೊಡಲ್ಲ ಎಂಬ ಸಂಘಟನೆಗೆ ನೆರವು ನೀಡುತ್ತಾ, ಭೂಮಿ ಕೊಡಲು ಮುಂದೆ ಬಂದಿರುವ ಪಹಣಿದಾರರಿಗೆ ಪರೋಕ್ಷವಾಗಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಯುವ ಘಟಕದ ಆಧ್ಯಕ್ಷ ನಲ್ಲೇನಹಳ್ಳಿ ಸುಬ್ರಮಣಿ, ಬಸವಾಪಟ್ಟಣ ಪ್ರಭುಗೌಡ, ನಾಗರಾಜ್, ವೆಂಕಟೇಶ್, ಕನಕಪ್ಪ, ಮೋಹನ್, ವಾಸುದೇವಮೂರ್ತಿ, ಆಂಜಿನಪ್ಪ, ಚನ್ನಕೃಷ್ಣಪ್ಪ, ಮುನಿರಾಜು ಮತ್ತಿತರರು ಇದ್ದರು.
ಸಿಕೆಬಿ-1
ಕೆಐಎಡಿಬಿಗೆ ಭೂಮಿ ಕೊಡಲು ಸಿದ್ಧವಿರುವ 13 ಹಳ್ಳಿಗಳ ರೈತರು ಅಂಬೇಡ್ಕರ್ ವೃತ್ತದಿಂದ ಪಂಜಿನ ಮೆರವಣಿಗೆ ನಡೆಸಿ ಗಮನ ಸೆಳೆದರು.