ಕೊಡವರ ಹೊಸ ವರ್ಷಾಚರಣೆ ಎಡಮ್ಯಾರ್ 1 ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವರ ಹೊಸ ವರ್ಷಾಚರಣೆ ಎಡಮ್ಯಾರ್ 1 ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ ನಡೆಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಹಕ್ಕುಗಳನ್ನು ಪ್ರತಿಪಾದಿಸಿದರು. 32ನೇ ವರ್ಷದ ಎಡಮ್ಯಾರ್1 ನ್ನು ಆಚರಿಸಿದ ಸಿಎನ್‌ಸಿ ಸಂಘಟನೆಯ ಪ್ರಮುಖರು ಹಾಗೂ ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್ ಪಾಟ್ ನೊಂದಿಗೆ ಗೋಣಿಕೊಪ್ಪಲಿನ ಆರ್‌ಎಂಸಿ ಯಾರ್ಡ್ ಬಳಿಯಿಂದ ಮುಖ್ಯ ಬೀದಿಯಲ್ಲಿ ಪೊಂಬೊಳ್ಕ್ ಮೆರವಣಿಗೆ ನಡೆಸಿದರು. ಮಾನವ ಸರಪಳಿ ರಚಿಸಿದ ನಂತರ ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಮಂಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಕೊಡವರು ಪ್ರತ್ಯೇಕ ಮೂಲವಂಶಸ್ಥ ಜನಾಂಗವಾಗಿದ್ದು, ಸಂವಿಧಾನದ ಮೂಲಭೂತ ಹಕ್ಕುಗಳ 32ನೇ ವಿಧಿ ಪ್ರಕಾರ ಭಾರತ ಸರ್ಕಾರ ಸಂವಿಧಾನಿಕ ಪರಿಹಾರವಾಗಿ ಕೊಡವರ ಈ ಕೆಳಗಿನ ಹಕ್ಕುಗಳನ್ನು ಮಾನ್ಯ ಮಾಡಬೇಕೆಂದು ಒತ್ತಾಯಿಸಿದರು.ಸಂವಿಧಾನದ ಆರ್ಟಿಕಲ್ 244 ಮತ್ತು 371 ವಿಧಿ ಮತ್ತು 6ನೇ ಶೆಡ್ಯೂಲ್ ರಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯದ ಹಕ್ಕು ನೀಡಬೇಕು. ಸಂವಿಧಾನದ 340 ಮತ್ತು 342ನೇ ವಿಧಿಯಡಿಯಲ್ಲಿ ವರ್ಗೀಕರಿಸಿ ಅತಿಸೂಕ್ಷ್ಮ ಕೊಡವ ಜನಾಂಗದ ರಕ್ಷಣೆಯಾಗಬೇಕು. ಸಂವಿಧಾನದ 25, 26 ರ ವಿಧಿಯಡಿ ಕೊಡವರ ಧಾರ್ಮಿಕ ಸಂಸ್ಕಾರ ತೋಕ್ -ಗನ್ ನ್ನು ಸೇರ್ಪಡೆಗೊಳಿಸಿ ದೈನಂದಿನ, ಧಾರ್ಮಿಕ ಕ್ರಿಯೆಯಾಗಿ ಕೋವಿ ಹೊಂದುವ ಹಕ್ಕನ್ನು ಆಭಾದಿತಗೊಳಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯಕ್ಕೆ ಪ್ರಾಚೀನ ಆದಿಮಸಂಜಾತ ಏಕಜನಾಂಗೀಯ ಬುಡಕಟ್ಟು ಕುಲ ಎಂದು ವರ್ಗಿಕರಿಸಬೇಕು ಎಂದು ಒತ್ತಾಯಿಸಿದರು.

ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಕೊಡವ ಜನಪದ ಸಂಸ್ಕೃತಿಯನ್ನು ಸೇರಿಸಬೇಕು. 1871-72 ರಿಂದ 1931 ರ ವರೆಗೆ ನಡೆಸಲಾದ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಮೂಲ ವಂಶಸ್ಥ ಜನಾಂಗವೆಂದು ವೈಜ್ಞಾನಿಕವಾಗಿ ದಾಖಲಿಸಲಾಗಿದ್ದು, ಆದರೆ 1941 ರಿಂದ 2011ರ ವರೆಗೆ ನಡೆಸಿದ ಜನಗಣತಿಯಲ್ಲಿ ಅವೈಜ್ಞಾನಿಕವಾಗಿ-ಅಸಂವಿಧಾನಿಕವಾಗಿ ಕೊಡವರನ್ನು ಇತರ ಬಲಾಢ್ಯ ಸಮುದಾಯದೊಂದಿಗೆ ವಿಲೀನಗೊಳಿಸಿ ಕೊಡವರ ಸ್ವತಂತ್ರ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ನಾಶಪಡಿಸಲಾಗಿದೆ. ಈಗ ಅದನ್ನು 1871-72 ರಿಂದ 1931ರ ವರೆಗೆ ನಡೆಸಲಾಗಿದ್ದ ವೈಜ್ಞಾನಿಕ ಜನಗಣತಿಯ ಆಧಾರದಲ್ಲಿ ಪುನರ್ ಜನಗಣತಿ ನಡೆಸಿ, ಕೊಡವ ಹೆಗ್ಗುರುತು ಮತ್ತು ಅನನ್ಯತೆಯನ್ನು ಉಳಿಸಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಪಟ್ಟಮಾಡ ಲಲಿತಾ ಗಣಪತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಅರೆಯಡ ಸವಿತಾ ತಿಮ್ಮಯ್ಯ, ಬೊಟ್ಟಂಗಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಮಾಡ ಸಾವಿತ್ರಿ, ನಂದಿನೆರವಂಡ ನಿಶಾ ಅಚ್ಚಯ್ಯ, ಮುದ್ದಿಯಡ ಲೀಲಾವತಿ, ಆದೆಂಗಡ ರೂಪಾ ರಮೇಶ್, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಬಾಚರಣಿಯಂಡ ಚಿಪ್ಪಣ್ಣ ಮತ್ತಿತರರು ಹಾಜರಿದ್ದರು.