ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯನ್ನು ಖಂಡಿಸಿ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ–ಹನುಮಸಾಗರ ವತಿಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಹಾಗೂ ಬೃಹತ್ ಪ್ರತಿಭಟನೆ ನಡೆಸಿತು.
ಕುಷ್ಟಗಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯನ್ನು ಖಂಡಿಸಿ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಬಳಗ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ–ಹನುಮಸಾಗರ ವತಿಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಹಾಗೂ ಬೃಹತ್ ಪ್ರತಿಭಟನೆ ನಡೆಸಿತು.
ಪಟ್ಟಣದ ಮಲ್ಲಯ್ಯ ವೃತ್ತದಿಂದ ಕೈಯಲ್ಲಿ ಪಂಜು ಹಿಡಿದು ಹೊರಟ ನೂರಾರು ಕಾರ್ಯಕರ್ತರು, ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಇಡಿ ವಿರುದ್ಧ ಘೋಷಣೆಗಳು ಮೊಳಗಿದವು. ರಾಜಕೀಯ ದ್ವೇಷದ ತನಿಖೆ ನಿಲ್ಲಿಸಿ, ಇಡಿ ದುರ್ಬಳಕೆ ನಿಲ್ಲಿಸಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು. ಜನಪ್ರಿಯ ನಾಯಕರನ್ನು ತನಿಖಾ ಸಂಸ್ಥೆಗಳ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಯಾವುದೇ ತನಿಖಾ ಸಂಸ್ಥೆಯನ್ನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ರಾಜಕೀಯ ಬೆಳವಣಿಗೆಯನ್ನು ತಡೆಯಲು ಎಷ್ಟೇ ಪ್ರಯತ್ನ ನಡೆದರೂ ಕಾರ್ಯಕರ್ತರ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ. ಸಾಹೇಬರೊಂದಿಗೆ ನಾವಿದ್ದೇವೆ, ಸಂಕಷ್ಟದ ಸಂದರ್ಭದಲ್ಲಿ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಹೇಳಿದರು. ನ್ಯಾಯಾಂಗದ ಮೇಲೆ ವಿಶ್ವಾಸವಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂದರು.ಸಾಹೇಬರೊಂದಿಗೆ ನಾವಿದ್ದೇವೆ ಎಂಬ ಘೋಷಣೆ ಪ್ರತಿಭಟನೆಯುದ್ದಕ್ಕೂ ಮೊಳಗಿತು. ತನಿಖಾ ಸಂಸ್ಥೆಗಳ ದುರ್ಬಳಕೆಗೆ ಕಡಿವಾಣ ಹಾಕಬೇಕು ಹಾಗೂ ರಾಜಕೀಯ ದ್ವೇಷದ ಕ್ರಮಗಳನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಲಾಡ್ಲೆಮಶಾಕ ದೋಟಿಹಾಳ, ಮಾನಪ್ಪ ತಳವಾರ, ಮೈನುದ್ದೀನ್ ಮುಲ್ಲಾ, ರತ್ನಾಕರ ಹಾಗೂ ಉಮೇಶ್ ಮಂಗಳೂರು ಉಪಸ್ಥಿತರಿದ್ದರು.