ತೊರೆಮಾವಿನಹಳ್ಳಿ ಸೊಸೈಟಿ ಸದಸ್ಯ ಪಂಚಾಕ್ಷರಿ ಅನರ್ಹತೆಗೆ ತಡೆ
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ತೊರೆಮಾವಿನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ನಂತರ ಅಧ್ಯಕ್ಷರಾಗಿದ್ದ ತಮ್ಮ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿ ತಮ್ಮನ್ನು ಅನರ್ಹಗೊಳಿಸಿದ್ದ ತಿಪಟೂರು ಸಹಕಾರ ಸಂಘಗಳ ಉಪ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಸಂಘದ ನಿರ್ದೇಶಕ ಪಂಚಾಕ್ಷರಿ ತಿಳಿಸಿದ್ದಾರೆ.ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹಾಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಸಿದ್ದಲಿಂಗಪ್ಪನವರಿಗೆ ಸಹಕಾರ ಸಂಘಗಳಲ್ಲಿ ಕೆಸಿಸಿ ಸಾಲವನ್ನು ಪ್ರತಿ ವರ್ಷ ಮುಂದುವರೆಸಲು ರೈತರಿಂದ ಕನಿಷ್ಠ 500 ರುಗಳಿಂದ 1000 ರುಗಳ ತನಕ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದೆ. ತಾವು ಸಂಘದ ಅಧ್ಯಕ್ಷರಾಗಿದ್ದ ವೇಳೆ ರೈತರಿಂದ ಅಕ್ರಮವಾಗಿ ಹಣ ವಸೂಲು ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದನ್ನು ನಾನು ವಿರೋಧಿಸಿದಕ್ಕೆ ನನ್ನನ್ನು ಸಂಘದ ಅಧ್ಯಕ್ಷ ಸ್ಥಾನ ಮತ್ತು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಲಾಯಿತು ಎಂದು ಪಂಚಾಕ್ಷರಿ ಆರೋಪಿಸಿದರು.
ಸತ್ತವರಿಗೂ ಸಾಲತೊರೆಮಾವಿನಹಳ್ಳಿ ಸೊಸೈಟಿಯಲ್ಲಿ ಸತ್ತವರ ಹೆಸರಿನಲ್ಲಿ ಸಾಲ ತೆಗೆದುಕೊಳ್ಳಲಾಗಿದೆ. ಹಲವಾರು ಮಂದಿ ಸತ್ತು ಹೋಗಿದ್ದರೂ ಸಹ ಅವರ ಹೆಸರಿನಲ್ಲಿ ಸಾಲವನ್ನು ಮುಂದುವರೆಸಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರೇಣುಕಯ್ಯ ಆಪಾದಿಸಿದರು. ಯೋಗಾನಂದ ಮೂರ್ತಿ ಎಂಬುವವರು ಸಂಘದಲ್ಲಿ ತಮ್ಮ ಮಗಳ ಮದುವೆಗೆಂದು ಲಕ್ಷಾಂತರ ರು ಠೇವಣಿ ಇರಿಸಿದ್ದರು. ಅವರು ಹಣ ಹಿಂತಿರುಗಿಸಿ ಎಂದು ಅಂಗಲಾಚಿದರೂ ಹಣ ಕೊಡದ ಸ್ಥಿತಿಯಲ್ಲಿ ಸಂಘ ಇದೆ. ಅವರು ಸಂಘದ ಕಟ್ಟಡದ ಮುಂದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರೂ ಆಶ್ಚರ್ಯವಿಲ್ಲ ಎಂದು ರೇಣುಕಯ್ಯ ಆತಂಕ ವ್ಯಕ್ತಪಡಿಸಿದರು. ವಿಧವೆಯೋರ್ವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಟ್ಟಿದ್ದ ಹಣವನ್ನೂ ಸಹ ಹಿಂತಿರುಗಿ ಕೊಟ್ಟಿಲ್ಲ. ದೇವಾಲಯದವರು ಇಟ್ಟಿರುವ ಠೇವಣಿ ಹಣವನ್ನೂ ಸಹ ಸಂಘದವರು ಕೊಡಲು ಹಿಂದೇಟು ಹಾಕುತ್ತಿದ್ದಾರೆಂದು ರೇಣುಕಯ್ಯ ದೂರಿದರು.
ತಂಡಗದ ಹಾಲಿ ನಿರ್ದೇಶಕ ಕೋಳಾಲ ರಘು ಮಾತನಾಡಿ, ತಂಡಗದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವು ರೈತರ ಜಮೀನನ್ನು ಸಂಘದ ಹೆಸರಿಗೆ ಅಡಮಾನ ಇಡಿಸಿಕೊಳ್ಳಲಾಗಿದೆ. ಆದರೆ ಅವರಿಗೆ ಸಾಲವನ್ನೇ ನೀಡಿಲ್ಲ. ಹೀಗಾದರೆ ರೈತರಿಂದ ಏಕೆ ಜಮೀನನ್ನು ಅಡ ಇರಿಸಿಕೊಳ್ಳಬೇಕಿತ್ತು. ರೈತರಿಗೆ ಸಕಾಲದಲ್ಲಿ ಸಾಲ ಕೊಡಿಸುವಲ್ಲಿ ವಿಫಲವಾಗಿರುವ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದೂ ಸಹ ರಘು ಆಗ್ರಹಿಸಿದರು. ತಾಲೂಕಿನಲ್ಲಿರುವ 24 ಸಹಕಾರ ಸಂಘಗಳಲ್ಲೂ ಅವ್ಯವಹಾರ ಅತಿಯಾಗಿದೆ. ಇದಕ್ಕೆ ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ ಮತ್ತು ಸಂಘದ ಕಾರ್ಯದರ್ಶಿಗಳು, ಬ್ಯಾಂಕ್ ನ ಸೂಪರ್ ವೈಸರ್ ಗಳೂ ಸೇರಿದಂತೆ ಹಲವಾರು ಮಂದಿ ಶಾಮೀಲಾಗಿದ್ದಾರೆ. ಕೆ.ಎನ್. ರಾಜಣ್ಣನವರ ಹೆಸರನ್ನೂ ಈ ಅಕ್ರಮದಲ್ಲಿ ತಳಕು ಹಾಕಿ ಅವರ ಹೆಸರಿಗೂ ಕಳಂಕ ತರುವ ಕಾರ್ಯ ಮಾಡಲಾಗುತ್ತಿದೆ. ಅವರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಂಚಾಕ್ಷರಿ, ರೇಣುಕಯ್ಯ ಮತ್ತು ರಘು ಸೇರಿದಂತೆ ಹಲವಾರು ಗ್ರಾಹಕರು ಒಕ್ಕೊರಲಿನಿಂದ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣನವರನ್ನು ಆಗ್ರಹಿಸಿದರು.