ಕನಕಗಿರಿಯಲ್ಲಿ ಧಾರಾಕಾರ ಮಳೆ: ಕೊಚ್ಚಿ ಹೋದ ಸೇತುವೆ

| Published : May 28 2024, 01:08 AM IST

ಸಾರಾಂಶ

ಭಾನುವಾರು ರಾತ್ರಿ ಸುರಿದ ಮಳೆಗೆ ಪಟ್ಟಣದ ತ್ರಿವೇಣಿ ಸಂಗಮ ಹಾಗೂ ಸುತ್ತಮುತ್ತಲಿನ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ರೈತರು ಸಂತಸಗೊಂಡಿದ್ದಾರೆ.

ತುಂಬಿದ ತ್ರಿವೇಣಿ ಸಂಗಮ, ಕೊಚ್ಚಿ ಹೋದ ಸೇತುವೆ

ಕನ್ನಡಪ್ರಭ ವಾರ್ತೆ ಕನಕಗಿರಿ

ಭಾನುವಾರು ರಾತ್ರಿ ಸುರಿದ ಮಳೆಗೆ ಪಟ್ಟಣದ ತ್ರಿವೇಣಿ ಸಂಗಮ ಹಾಗೂ ಸುತ್ತಮುತ್ತಲಿನ ಹಳ್ಳ-ಕೊಳ್ಳಗಳು ತುಂಬಿ ಹರಿದಿದ್ದು, ರೈತರು ಸಂತಸಗೊಂಡಿದ್ದಾರೆ.

ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆಯೂ ಸುಮಾರು 2 ತಾಸು ಧಾರಾಕಾರವಾಗಿ ಸುರಿದಿದ್ದರಿಂದ ತಗ್ಗು ಪ್ರದೇಶಗಳು, ಚರಂಡಿಗಳು, ರಸ್ತೆಗಳು ಜಲಾವೃತವಾಗಿದ್ದವು. ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹೊಲ, ತೋಟಗಳಲ್ಲಿನ ಒಡ್ಡುಗಳಲ್ಲಿ ನೀರು ತುಂಬಿಕೊಂಡಿರುವುದು ಕಂಡು ಬಂತು.

ಕಾಂಗ್ರೆಸ್ ಕಚೇರಿ ಸುತ್ತಲೂ ನೀರು:ಹಲವು ವರ್ಷಗಳಿಂದ ಇಲ್ಲಿನ ಕಾಂಗ್ರೆಸ್ ಕಚೇರಿ ಸುತ್ತಲೂ ಮಳೆಗೆ ನೀರು ನಿಂತುಕೊಳ್ಳುವುದು ಸಾಮಾನ್ಯವಾಗಿದೆ. ಕಚೇರಿ ತಗ್ಗು ಪ್ರದೇಶದಲ್ಲಿರುವ ಕಾರಣ ರಸ್ತೆ ಹಾಗೂ ವಾರ್ಡಿನ ನೀರು ಇಲ್ಲಿಗೆ ಬಂದು ಸೇರುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ಸಮಸ್ಯೆಯಾಗುತ್ತಿದ್ದು, ಇದು ಈವರೆಗೂ ತಪ್ಪಿಲ್ಲವಾಗಿದೆ.

ಕೊಚ್ಚಿ ಹೋದ ಸೇತುವೆ:

ಮಾರ್ಚ್ ತಿಂಗಳಲ್ಲಿ ನಡೆದ ಕನಕಗಿರಿ ಉತ್ಸವ ಭಾಗವಾಗಿ ಮುಖ್ಯ ವೇದಿಕೆಗೆ ಹೋಗಲು ನಿರ್ಮಿಸಿದ್ದ ಎರಡು ಸೇತುವೆಗಳು ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿವೆ. ಇದರಿಂದ ರೈತರ ಹೊಲ, ತೋಟಗಳಿಗೆ ಸಂಚರಿಸಲು ತೊಂದರೆಯಾಗಿದೆ. ಸೇತುವೆ ಕಾಮಗಾರಿಯ ಬಿಲ್ ಪಾವತಿಯಾಗುವ ಮುನ್ನವೇ ಕೊಚ್ಚಿ ಹೋಗಿರುವುದು ಗುತ್ತಿಗೆದಾರರಿಗೆ ಆತಂಕವುಂಟಾಗಿದೆ.

ಮನೆಯ ಮೇಲ್ಚಾವಣಿ, ಗೋಡೆ ಕುಸಿತ:

ಮಳೆಗೆ ಪಟ್ಟಣದ 17ನೇ ವಾರ್ಡಿನ ಗಂಗಮ್ಮ ಎಂಬವರಿಗೆ ಸೇರಿದ ಗೋಡೆ ಕುಸಿದರೆ, 15ನೇ ವಾರ್ಡಿನ ಸಣ್ಣ ನಾಗಪ್ಪ ಚಿಟಗಿ ಎನ್ನುವವರ ಮನೆಯ ಮೇಲ್ಛಾವಣಿ ಬಿದ್ದಿದ್ದು, ಸ್ಥಳಕ್ಕೆ ಪಪಂ ಕರವಸೂಲಿಗಾರ ಪ್ರಕಾಶ ಮಹಿಪತಿ ಹಾಗೂ ಕಂದಾಯ ನಿರೀಕ್ಷಕ ಬಸೀರುದ್ದಿನ್ ಭೇಟಿ ನೀಡಿ, ಪರಿಶೀಲಿಸಿ ವರದಿ ಪಡೆದಿದ್ದಾರೆ. ಗೋಡೆ ಹಾಗೂ ಮೇಲ್ಛಾವಣಿ ಕುಸಿತದಿಂದ ಯಾವುದೇ ಪ್ರಾಣಿ ಹಾನಿಯಾಗಿಲ್ಲ. ಇನ್ನೂ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಮನೆಗಳಲ್ಲಿ ಮಳೆ ನೀರು ನುಗ್ಗಿದೆ.