ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.ಮಹಾನಗರದ ವಿವಿಧ ಬಡಾವಣೆಗಳಲ್ಲಿ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದ್ದು, ಕೆಲವೆಡೆ ಮರಗಳು ಧರಾಶಾಯಿಯಾಗಿವೆ.
ತಾಲೂಕಿನ ನೂಲ್ವಿ ಗ್ರಾಮ ಮತ್ತು ಸುತ್ತಲೂ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಹುಬ್ಬಳ್ಳಿಯ ಬಹುತೇಕ ಬಡಾವಣೆಗಳಲ್ಲಿ ಒಳಚರಂಡಿ ಬ್ಲಾಕ್ ಆಗಿದ್ದರಿಂದ ಭಾರಿ ಪ್ರಮಾಣ ನೀರು ರಸ್ತೆಗಳ ತುಂಬೆಲ್ಲ ಹರಿಯಿತು. ಅರವಿಂದ ನಗರದ ವೆಂಕಟೇಶ್ವರ ದೇವಸ್ಥಾನ ಬಳಿ ಏಳೆಂಟು ಮನೆಗಳಿಗೆ ಗಲೀಜು ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಬೇಕಾಯಿತು. ಕಳೆದ ಒಂದು ತಿಂಗಳ ಹಿಂದೆ ಪಾಲಿಕೆಯವರು ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಇದರಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.ಗೋಕುಲ ರಸ್ತೆಯ ರಾಮಲಿಂಗೇಶ್ವರ ನಗರದ ಲಕ್ಷ್ಮೀ ದೇವಸ್ಥಾನ ಹಿಂಭಾಗದಲ್ಲೂ ನಾಲ್ಕು ಮನೆಗಳಿಗೆ ನೀರು ಹರಿದಿರುವ ಬಗ್ಗೆ ವರದಿಯಾಗಿದ್ದು, ಒಳಚರಂಡಿ ನೀರು ಹೊರ ಹಾಕುವಲ್ಲಿ ನಿವಾಸಿಗಳು ಹೈರಾಣಾದರು. ಗಬ್ಬು ವಾಸನೆಯು ಜೀವ ಹಿಂಡುವಂತಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಉರುಳಿದ ಮರಗಳು:ಅರವಿಂದನಗರದ ಮೊದಲ ಕ್ರಾಸ್ ಹಾಗೂ ಪಿ ಆ್ಯಂಡ್ ಕ್ವಾಟರ್ಸ್ ಹತ್ತಿರ ಮರಗಳು ಉರುಳಿ ಬಿದ್ದು ಗಾಬರಿ ಹುಟ್ಟಿಸಿತ್ತು. ಇನ್ನೊಂದೆಡೆ ಹೊಸ ಕೋರ್ಟ್ ಬಳಿಯ ಕಲ್ಲೂರ ಲೇಔಟ್‌ನಲ್ಲಿ ಮರ ಬಿದ್ದಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ.
ಹೊಂಡಗಳಂತಾದ ರಸ್ತೆಗಳುಮಹಾನಗರದಲ್ಲಿ ಸುರಿದ ಮಳೆಯಿಂದ ನೀರು ಹರಿಯಲು ಅಸ್ಪದ ಇಲ್ಲದಂತಾಗಿ ರಸ್ತೆಗಳೆಲ್ಲ ಹೊಂಡಗಳಂತಾಗಿ ಪರಿವರ್ತನೆಗೊಂಡಿದ್ದವು. ಅದರಲ್ಲೂ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಸಮಸ್ಯೆ ಸೃಷ್ಟಿಸಿತ್ತು. ಮಳೆ ನಿಂತ ಒಂದೂವರೆಗೂ ತಾಸಿನವರೆಗೂ ನೀರು ನಿಧಾನಕ್ಕೆ ಕಡಿಮೆಯಾಯಿತು. ನಾಲೆಯಲ್ಲಿ ನೀರು ಹರಿಯಲು ಆಸ್ಪದ ಇಲ್ಲದಂತಾಗಿ ರಸ್ತೆ ಮೇಲೆ ಸಂಗ್ರಹವಾಗುತ್ತದೆ ಎಂದು ವರ್ತಕರು ದೂರಿದ್ದಾರೆ.
ಬಿಆರ್‌ಟಿಎಸ್ ಕಾರಿಡಾರ್ಇನ್ನು ಹುಬ್ಬಳ್ಳಿ-ಧಾರವಾಡ ಮಧ್ಯೆ ಇರುವ ಬಿಆರ್‌ಟಿಎಸ್ ಬಸ್ ಕಾರಿಡಾರ್‌ನಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಇಲ್ಲಿನ ಶ್ರೀನಗರ ಕ್ರಾಸ್, ಧಾರವಾಡದ ಟೋಲ್ ನಾಕಾ ಬಳಿ ಕಾರಿಡಾರ್‌ನಲ್ಲಿ ಮೊಳಕಾಲಿನ ವರೆಗೆ ನೀರು ನಿಂತಿತ್ತು.
ಸಂಚಾರಕ್ಕೆ ಅಡ್ಡಿನೂಲ್ವಿ, ಕುಂದಗೋಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಕುಂದಗೋಳ ಕ್ರಾಸ್‌ನಲ್ಲಿರುವ ಬ್ರಿಜ್ ನಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬ್ರಿಡ್ಜ್ ಕೆಳಗಡೆ ನೀರು ಸರಾಗವಾಗಿ ಹರಿಯಲು ಅಸಾಧ್ಯದ ಪರಿಸ್ಥಿತಿ ಇದ್ದು, ಪ್ರತಿ ಮಳೆ ಸಂದರ್ಭದಲ್ಲಿ ಈ ಸಮಸ್ಯೆ ಕಾಡುತ್ತಿದೆ ಎಂದು ಅಲ್ಲಿನ ಜನರು ಹೇಳುತ್ತಾರೆ.