ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಜೋರು ಮಳೆ ಸುರಿಯುತ್ತಿದ್ದು, ಜಲಾಶಯಗಳ ಒಳ ಹರಿವು ಹೆಚ್ಚಾಗುತ್ತಿದ್ದು, ಈಗಾಗಲೇ ಭರ್ತಿಯಾಗಿರುವ ತುಂಗಾ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಶಿವಮೊಗ್ಗದಲ್ಲಿ ಕೊರ್ಪಳ್ಳಯ್ಯನ ಛತ್ರದ ಬಳಿ ಇರುವ ಮಂಟಪ ಮುಳುಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಂಟಪ ಮುಳುಗಿದೆ.ಶಿವಮೊಗ್ಗದಲ್ಲಿ ಮಳೆ ಬಿಟ್ಟು ಬಿಟ್ಟು ಅಬ್ಬರಿಸುತ್ತಿದೆ. ಕೆಲವಡೆ ರಚ್ಚೆ ಹಿಡಿದಂತೆ ಸುರಿಯುತ್ತಿದೆ. ಮಳೆಯಿಂದಾಗಿ ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಗಾಜನೂರು ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್‌ಗಳನ್ನ ಓಪನ್ ಮಾಡಲಾಗಿದ್ದು, ಮಂಗಳವಾರ 41 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿಸಲಾಗುತ್ತಿದೆ. ಡ್ಯಾಂನಿಂದ ಹೊರಬಿಡುವ ನೀರಿನ ಪ್ರಮಾಣ ಹೆಚ್ಚಾದಂತೆ, ಶಿವಮೊಗ್ಗದಲ್ಲಿ ತುಂಗಾ ನದಿಯ ಹರಿವು ಕೂಡ ಹೆಚ್ಚಾಗುತ್ತದೆ. ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಮಹಾನಗರದ ಪಾಲಿಕೆ ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಆಡಳಿತ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ 52 ಮಿ.ಮೀ., ಭದ್ರಾವತಿ 26. 40 ಮಿ.ಮೀ., ತೀರ್ಥಹಳ್ಳಿ 120. 90 ಮಿ.ಮೀ., ಸಾಗರ 129. 10 ಮಿ.ಮೀ., ಶಿಕಾರಿಪುರ 57. 90 ಮಿ.ಮೀ., ಸೊರಬ 58. 50 ಮಿ.ಮೀ. ಹಾಗೂ ಹೊಸನಗರದಲ್ಲಿ 133. 60 ಮಿ.ಮೀ. ಮಳೆಯಾಗಿದೆ.ಇನ್ನು, ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ಕೋರ್ಪಲಯ್ಯ ಛತ್ರ ಮಂಟಪ ಮುಳುಗಿದೆ. ಇದನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಜನರು ನಿರಾಸೆಯಿಂದ ಹಿಂತಿರುಗುವಂತಾಗಿದೆ.
ಕಣ್ತುಂಬಿಕೊಳ್ಳಲು ಬಂದವರಿಗೆ ನಿರಾಸೆ:ಪ್ರತಿ ಮಳೆಗಾಲದಲ್ಲಿ ಜಲಾಶಯದಿಂದ ನೀರು ಹೊರ ಬಿಡುತ್ತಿದ್ದಂತೆ ಶಿವಮೊಗ್ಗದ ಜನರು ಮಂಟಪದತ್ತ ಕಣ್ಣು ಹಾಯಿಸುವುದು ಸಾಮಾನ್ಯ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರು ಶಿವಮೊಗ್ಗದವರು ‘ಮಂಟಪ ಮುಳುಗಿತಾ’ ಎಂಬ ಕುತೂಹಲದಿಂದ ಕೇಳುತ್ತಾರೆ. ಮಂಟಪ ಮುಳುಗಿದಾಗ ನಗರದ ವಿವಿಧೆಡೆಯಿಂದ ಜನರು ನದಿ ದಂಡೆಗೆ ಬರುವುದು ಸಾಮಾನ್ಯ. ಮಂಟಪದ ಬಳಿ ಪೂಜೆ ಸಲ್ಲಿಸಿ, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಮಂಟಪ ಮುಳುಗಿರುವುದನ್ನು ನೋಡಲು ಟಿಕೆಟ್ ಖರೀದಿಸಬೇಕಿದೆ.
ಗೇಟ್ ಬಳಿ ಬಂದು ಜನರ ಆಕ್ರೋಶ:ಅಯ್ಯಪ್ಪ ಸ್ವಾಮಿ ಶಾಲೆ ಸಮೀಪದಲ್ಲಿ ಮಂಟಪದ ಬಳಿ ತೆರಳಲು ಇರುವ ಗೇಟ್ ಬಂದ್ ಮಾಡಲಾಗಿದೆ. ಹಿಂದಿ ಭಾಷಿಕ ಸೆಕ್ಯೂರಿಟಿಯನ್ನು ಇಲ್ಲಿ ನಿಲ್ಲಿಸಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಎದುರಿಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಹಾಗಾಗಿ ಮಂಟಪ ನೋಡಲು ಸಾಧ್ಯವಿಲ್ಲ. ಬೆಕ್ಕಿನ ಕಲ್ಮಠದ ಸಮೀಪ ವಿದ್ಯಾರ್ಥಿನಿಯರ ಸರ್ಕಾರಿ ಹಾಸ್ಟೆಲ್ ಕಡೆಯಿಂದ ಒಳ ಹೋಗಲು ಅವಕಾಶವಿದೆ. ಆದರೆ, ಹಣ ತೆತ್ತು ಟಿಕೆಟ್ ಖರೀದಿಸಿ ಒಳ ಹೋಗಬೇಕಿದೆ. ಗೇಟ್‌ನಲ್ಲಿಯೇ ನಿಂತು ಜನರು ಮಂಟಪ ವೀಕ್ಷಿಸಲಾಗದೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕಿ ಹಿಂತಿರುಗುತ್ತಿದ್ದಾರೆ.
ಉಕ್ಕಿ ಹರಿದ ಮಾಲತಿ; ಶೃಂಗೇರಿ ಸಂಪರ್ಕ ಕಡಿತತೀರ್ಥಹಳ್ಳಿ: ಕಳೆದ 24 ತಾಸುಗಳ ಅವಧಿಯಲ್ಲಿ ಆಗುಂಬೆಯಲ್ಲಿ 342 ಮಿಮಿ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಭಾರಿ ಗಾಳಿಯಿಂದ ಕೂಡಿದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಮನೆ ಕೊಟ್ಟಿಗೆಗಳು ಕುಸಿದಿವೆ. ಕೆಲವೆಡೆ ತೋಟಗಳಲ್ಲಿ ಅಡಕೆ ಮರಗಳು ತರಗೆಲೆಗಳಂತೆ ಮುರಿದು ಬಿದ್ದಿದ್ದು ಹಾನಿ ಸಂಭವಿಸಿದೆ. ಮಂಗಳವಾರ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ತಾಲೂಕಿನಲ್ಲಿ ವಾಡಿಕೆಯಂತೆ ಆಗುಂಬೆಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಮಂಗಳವಾರ ಬೆಳಗಿನವರೆಗೆ 342 ಮಿಮಿ ಮಳೆಯಾಗಿದೆ. ಉಳಿದಂತೆ ತೀರ್ಥಹಳ್ಳಿ 150.6 ಆರಗ 137, ದೇವಂಗಿ 120,ಅರಳಸುರುಳಿ 124.6, ಕೋಣಂದೂರು 98.6 ಮಾಳೂರು 164, ಮೇಗರವಳ್ಳಿ 164.7 ಮೃಗವಧೆ 126.2 ಹಾಗೂ ಹುಂಚದಕಟ್ಟೆ 110.8 ಮಿಮೀ ಮಳೆಯಾಗಿದೆ.ವಿಪರೀತವಾಗಿ ಬೀಸಿದ ಗಾಳಿಯಿಂದಾಗಿ ತಾಲೂಕಿನ ಕೆಲವೆಡೆ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಕಳೆದ ಎರಡು ದಿನಗಳಿಂದ ಸುಮಾರು 150 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿವೆ. ಇದರಿಂದಾಗಿ ಆರಗ, ಕಟ್ಟೆಹಕ್ಕಲು, ಮೇಗರವಳ್ಳಿ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಬುಕ್ಲಾಪುರ, ಆರಗ ಸಮೀಪದ ಮುಕ್ತಿಹರಿಹರಪುರದ ಜನರು ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ.
ತಾಲೂಕಿನ ಪ್ರಮುಖ ನದಿಗಳಾದ ತುಂಗಾ, ಮಾಲತಿ ಸೇರಿದಂತೆ ಎಲ್ಲಾ ನದಿ ಮತ್ತು ಕೊಳ್ಳಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿವೆ. ಮಾಲತಿ ನದಿ ನೀರು ಉಕ್ಕಿ ಹರಿಯುತ್ತಿದ್ದು ಕುಂದಾದ್ರಿ ಸಮೀಪದ ನಾಬಳ ಬಳಿ ನದಿ ನೀರಿನಿಂದ ಸೇತುವೆ ಮುಳುಗಿದ್ದು ಗುಡ್ಡೇಕೇರಿ ಶೃಂಗೇರಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ.ಸೋಮವಾರ ರಾತ್ರಿಯಿಂದ ಬೀಸಿದ ಬಿರುಗಾಳಿಯಿಂದಾಗಿ ಹಲವಾರು ಮನೆಗಳು ಕೊಟ್ಟಿಗೆಗಳು ಕುಸಿದಿವೆ. ಕೆಲವೆಡೆ ಅಡಕೆ ಮರಗಳು ತರಗೆಲೆಗಳಂತೆ ಮುರಿದು ಬಿದ್ದಿವೆ. ತಾಲೂಕಿನ ಪ್ರಮುಖ ನದಿಗಳಾದ ತುಂಗಾ ಮಾಲತಿ ಕುಶಾವತಿ, ಆಗುಂಬೆ ಸಮೀಪದ ಮಲಪಹಾರಿ, ಕನ್ನಂಗಿ ಸಮೀಪದ ಕುಂಟೇಹಳ್ಳ, ಆರಗ ಬಳಿಯ ಗೋಪಿನಾಥ ಹಳ್ಳಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಭಾಗದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿದ್ದು ಕೆಲವೆಡೆ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.
ಗಾಳಿ ಮಳೆಯಿಂದಾಗಿ ಮುತ್ತುವಳ್ಳಿ ಗ್ರಾಮದ ಪದ್ಮಾವತಿಯವರ ವಾಸದ ಮನೆ, ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ ಬಾಂಡ್ಯ ಗ್ರಾಮದ ದೇವೇಂದ್ರರಿಗೆ ಸೇರಿದ ಕೊಟ್ಟಿಗೆ, ಹುರುಳಿ ಗ್ರಾಮದ ಶಾರದಮ್ಮನವರ ವಾಸದಮನೆ ಕುಸಿದಿವೆ. ಮಾಲತಿ ನದಿದಡದಲ್ಲಿರುವ ಕಲ್ಮನೆ ಬಳಿ ಕೃಷಿಭೂಮಿ ನದಿನೀರಿನಿಂದ ಆವೃತವಾಗಿದೆ. ಪಟ್ಟಣ ಸಮೀಪ ತುಂಗಾನದಿಯಲ್ಲಿರುವ ರಾಮಮಂಟಪ ಮಂಗಳವಾರ ಮಧ್ಯಾಹ್ನದ ವೇಳೆಗೆ ಮುಳುಗುವ ಹಂತದಲ್ಲಿತ್ತು. ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ನದಿಗಳಲ್ಲಿ ನಿರಿನ ಏರಿಕೆಯಾಗುವ ಸಾಧ್ಯತೆಯೂ ಇದೆ.ಮೈದುಂಬಿದ ಕೊಲ್ಲಿ ಬಚ್ಚಲು ಚೆಕ್ ಡ್ಯಾಮ್
ಆನಂದಪುರ: ಶಿವಮೊಗ್ಗ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಗೀಳಾಲ ಗುಂಡಿಯ ಸಮೀಪ ನಿರ್ಮಾಣವಾಗಿರುವ ಕೊಲ್ಲಿ ಬಚ್ಚಲು ಚೆಕ್ ಡ್ಯಾಮ್ ತುಂಬಿ ಹರಿಯುತ್ತಿದೆ.ಸುತ್ತಲೂ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿ ಇರುವಂತಹ ತುಪ್ಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣೆ ಹೊಸೂರು ಗ್ರಾಮದ ಕೊನೆಯಲ್ಲಿ ಇರುವಂತಹ ಕೊಲ್ಲಿ ಬಚ್ಚಲು ಹಳ್ಳಕ್ಕೆ ಗೀಳಾಲಗುಂಡಿ ಸಮೀಪ ಕೊಲ್ಲಿ ಬಚ್ಚಲು ಚಕ್ ಡ್ಯಾಮ್ ನಿರ್ಮಿಸಲಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೆಕ್ ಡ್ಯಾಮ್ ಸಂಪೂರ್ಣ ಭರ್ತಿಯಾಗಿ ಹೊರ ಹೋಗುವ ನೀರು ಅಮ್ಮನ ಕೆರೆಗೆ ಬಿದ್ದು ನಂತರ ಲಕ್ಕವಳ್ಳಿ ಹಳ್ಳ ದಿಂದ ನಂದಿಹೊಳೆಗೆ ಸೇರುತ್ತದೆ. ಇನ್ನೊಂದು ಭಾಗದಲ್ಲಿ ಹೋಗುವಂತಹ ನೀರು ಹೊಸಕೊಪ್ಪ ಮೂಲಕ ಅಂಬ್ಲಿಗೊಳ ಜಲಾಶಯಕ್ಕೆ ಸೇರುತ್ತದೆ. ಚೆಕ್ ಡ್ಯಾಮ್ ಯೋಜನೆ ಸಣ್ಣ ನೀರಾವರಿ ಯೋಜನೆ ಅಡಿಯಲ್ಲಿ 2005ರಲ್ಲಿ ಪ್ರಾರಂಭಗೊಂಡು, 2008ರಲ್ಲಿ ಮುಕ್ತಾಯಗೊಂಡಿತ್ತು. ಈ ಕೊಲ್ಲಿ ಬಚ್ಚಲು ಡ್ಯಾಮ್ 62 ಮೀಟರ್ ಅಗಲ 9 ಮೀಟರ್ ಎತ್ತರವಿದ್ದು, 8 ಮೀಟರ್ ಅಗಲದ ವಿಸ್ತೀರ್ಣದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಹರಿಯುವಂತಹ ನೀರು ಪ್ರವಾಸಿಗರನ್ನು ಸೆಳೆಯುವಂತಿದೆ. ಸತತ ಮಳೆಗೆ ಕೃಷಿ ಚಟುವಟಿಕೆ ಸ್ತಬ್ಧರಿಪ್ಪನ್‍ಪೇಟೆ: ನಡು ಮಲೆನಾಡು ರಿಪ್ಪನ್‍ಪೇಟೆ ವ್ಯಾಪ್ತಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಇಲ್ಲಿನ ಹಲವು ಕೆರೆಕಟ್ಟೆಗಳು ಹಳ್ಳಕೊಳ್ಳಗಳು ಮೈದುಂಬಿ ಹರಿಯಲಾರಂಭಿಸಿವೆ. ಎಲ್ಲಿ ಎಲ್ಲಿಯೂ ಜಲ ಜಲಧಾರೆಯಂತಾಗಿ ಜನಾಕರ್ಷಣೆಯಾಗಿದೆ.
ರಾಜ್ಯ ಹೆದ್ದಾರಿ ಶಿವಮೊಗ್ಗ ಕುಂದಾಪುರ ಮಾರ್ಗದ ಗವಟೂರು ಬಳಿಯ ಶರ್ಮಿಣಾವತಿ ಮತ್ತು ಸೀಗೆಹಳ್ಳ ಕಲ್ಲೂರು ಹೆದ್ದಾರಿಪುರ ಬಳಿಯ ಕುಮದ್ವತಿ ಸೇತುವೆಯಲ್ಲಿ ಹೊರಹರಿವು ಹೆಚ್ಚಳವಾಗಿದೆ.ಸೋಮವಾರ ಮತ್ತು ಮಂಗಳವಾರ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆತಾರಿಗ ಚಿಕ್ಕಜೇನಿ ಗ್ರಾಮದ ಬಳಿ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿರುವುದನ್ನು ಬಿಟ್ಟರೆ ಇನ್ನಾವುದೇ ಅಪಾಯದ ಘಟನೆಗಳು ಸಂಭವಿಸಿಲ್ಲ.
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷಿ ಚಟುವಟಿಕೆ ಮಾಡಲಾಗದೇ ರೈತರು ಮನೆಯಲ್ಲಿ ಕಾಲಕಳೆಯಬೇಕಾದ ಅನಿರ್ಯತೆತೆ ಎದುರಾಗಿದೆ. ನಡು ಮಲೆನಾಡಿನಲ್ಲಿ ಮಸಲಧಾರೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ರೈತರು ಭತ್ತದ ಸಸಿ ಮಡಿ ಹಾಕಿ ನಾಟಿ ಕಾರ್ಯಕ್ಕೆ ಇನ್ನೂ ಈ ತಿಂಗಳ ಅಂತ್ಯದಿಂದ ಆರಂಭಗೊಳ್ಳುವ ನಿರೀಕ್ಷೆಯಲ್ಲಿ ರೈತರು ಗದ್ದೆಯನ್ನು ಸಿದ್ದಗೊಳಿಸುವ ಭರದಲ್ಲಿ ತೊಡಗಿಕೊಂಡಿದ್ದಾರೆ.