ಸಾರಾಂಶ
- ಬಾಲಕಿಯ ಫೋಟೋ ಫ್ಲೆಕ್ಸ್ ಹಾಕಿದ್ದ ನಿಟುವಳ್ಳಿ ಅಲ್ತಾಫ್ ಅಪರಾಧಿ
- ಅಪರಾಧಿಗೆ 6 ತಿಂಗಳ ಕಾರಾಗೃಹ ಶಿಕ್ಷೆ, ₹10 ಸಾವಿರ ದಂಡ- ಪ್ರೀತಿಸದಿದ್ದರೆ ಆ್ಯಸಿಡ್ ಹಾಕಿ, ಕೊಲ್ಲುವುದಾಗಿ ಅಪ್ತಾಪ್ತೆಗೆ ಬೆದರಿಕೆ
- ಫ್ಲೆಕ್ಸ್ ನೋಡಿ ಅಪ್ರಾಪ್ತೆ ತಂದೆಗೆ ಮಾಹಿತಿ ನೀಡಿದ್ದ ಜನ: ದೂರು- ಅಲ್ತಾಫ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ಬಾಲಕಿ ತಂದೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಅಪ್ರಾಪ್ತೆಗೆ ಪೀಡಿಸಿ, ಚುಡಾಯಿಸಿ ಮಾನಹಾನಿ ಮಾಡಿದ್ದಲ್ಲದೇ, ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ ಅಪರಾಧಿಗೆ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.ನಗರದ ನಿಟುವಳ್ಳಿಯ ಆಶಾ ವೈನ್ಸ್ ಮುಂಭಾಗದ ನಿವಾಸಿ ಅಲ್ತಾಫ್ (22) ಅಪರಾಧಿ. ಅದೇ ಭಾಗದ 16 ವರ್ಷದ ಬಾಲಕಿಯನ್ನು ಅಲ್ತಾಫ್ ಪ್ರೀತಿಸುವಂತೆ ಪೀಡಿಸಿ, ಚುಡಾಯಿಸುತ್ತಿದ್ದ. ಪ್ರೀತಿಸದಿದ್ದರೆ ಮುಖಕ್ಕೆ ಆ್ಯಸಿಡ್ ಎರಚಿ, ಕಿಡ್ನ್ಯಾಪ್ ಮಾಡಿ, ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದನು. ಅಲ್ಲದೇ, ಅಪ್ರಾಪ್ತೆಯು ಮೊಬೈಲ್‌ನ ವಾಟ್ಸಪ್ ಡಿಪಿ ಹಾಕಿಕೊಂಡಿದ್ದ ಫೋಟೋವನ್ನು ತೆಗೆದುಕೊಂಡು, ತನ್ನ ಫೋಟೋದ ಜೊತೆಗೆ ಸೇರಿಸಿ, ಎಡಿಟ್ ಮಾಡಿ, ಫ್ಲೆಕ್ಸ್ ಮಾಡಿಸಿ, 22.3.2022ರಂದು ಎಚ್‌ಕೆಆರ್ ವೃತ್ತದ ಬಳಿ ಸಜ್ಜನ್ ಬೇಕರಿ ಬಳಿ ಅಲ್ತಾಫ್ ಫ್ಲೆಕ್ಸ್ ಹಾಕಿದ್ದನು. ಫ್ಲೆಕ್ಸ್ ನೋಡಿದ ಜನರು ಅದನ್ನು ಕಿತ್ತು, ಅಪ್ರಾಪ್ತೆ ತಂದೆ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಅಲ್ತಾಫ್ ವಿರುದ್ಧ ಬಾಲಕಿ ತಂದೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ತನಿಖಾಧಿಕಾರಿಯಾಗಿ ಪೊಲೀಸ್ ನಿರೀಕ್ಷಕಿ ಮಲ್ಲಮ್ಮ ಚೌಬೆ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ನ್ಯಾಯಾಲಯ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಪ್ರಕರಣದ ವಿಚಾರಣೆ ನಡೆಸಿದರು. ಅಲ್ತಾಫ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿ ಎಂದು ತೀರ್ಮಾನಿಸಿ, ತೀರ್ಪು ನೀಡಿದರು.ಪ್ರಕರಣದಲ್ಲಿ ಸರ್ಕಾರದ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು. ಅಧಿಕಾರಿ, ಸಿಬ್ಬಂದಿ ಹಾಗೂ ಸರ್ಕಾರಿ ವಕೀಲರ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ ಶ್ಲಾಘಿಸಿದ್ದಾರೆ.
- - - (ಸಾಂದರ್ಭಿಕ ಚಿತ್ರ)