ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಾಸನ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸಿಗರ ದಿನಾಚರಣೆಯನ್ನು ಆಚರಿಸಲಾಯಿತು.ಪಟ್ಟಣದ ಮಯೂರ ವೇಲಾಪುರಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಬೇಲೂರು ಹಾಗೂ ಹಳೇಬೀಡು ಮಯೂರ ಹೊಟೇಲ್ ವ್ಯವಸ್ಥಾಪಕರಾದ ಶ್ರೇಯಸ್ ಹಾಗೂ ಮಯೂರ ಯಗಚಿ ಹೋಟೆಲ್ ವ್ಯವಸ್ಥಾಪಕರಾದ ಪಾಪಣ್ಣ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಶ್ರೇಯಸ್, ಪ್ರತಿ ವರ್ಷದಂತೆ ಈ ಬಾರಿ ಕೂಡ ಇಂದು (ಸೆಪ್ಟೆಂಬರ್ 27)ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ.ವಿಶ್ವ ಪ್ರವಾಸೋದ್ಯಮ ಸಂಘಟನೆಯ ಅಧಿಕೃತ ಕಾರ್ಯಕ್ರಮಗಳೊಂದಿಗೆ ಬೇಲೂರಿನ ಹೋಟೆಲ್ ಮಯೂರ ವೇಲಾಪುರಿಯಲ್ಲಿ ಆಚರಿಸಲಾಗುತ್ತಿದ್ದು, ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡುವುದರೊಂದಿಗೆ, ಪ್ರವಾಸಿಗರ ಮತ್ತು ಸ್ಥಳೀಯರ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಪೋಷಿಸುತ್ತದೆ, ಲಕ್ಷಾಂತರ ಮಂದಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಸಮುದಾಯದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೂಡ ಸಹಕರಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಯುನೈಟೆಡ್ ನೇಷನ್ಸ್ ವರ್ಲ್ಡ್ ಟೂರಿಸಂ ಆರ್ಗನೈಸೇಶನ್ -ವಿಶ್ವ ಪ್ರವಾಸೋದ್ಯಮವನ್ನು ಸಮರ್ಥನೀಯವಾಗಿ ಸರ್ವರಿಗೂ ತಲುಪಿಸಲು ಪ್ರಯತ್ನಿಸುತ್ತಿದೆ ಎಂದರು.ನಂತರ ಮಯೂರ ಯಗಚಿ ಹೋಟೆಲ್ ವ್ಯವಸ್ಥಾಪಕ ಪಾಪಣ್ಣ ಮಾತನಾಡಿ, ಮೊದಲು ವಿಶ್ವ ಪ್ರವಾಸೋದ್ಯಮದ ದಿನದ ಅಂಗವಾಗಿ ಕಾರ್ಯಕ್ರಮಕ್ಕೆ ಮೊದಲು ಡೆಸ್ಟಿನಿ ರೈಡರ್ಸ್ (ಬೈಕ್ ಜಾಥದ) ಮೂಲಕ ಶ್ರೀ ಚನ್ನಕೇಶವ ದೇಗುಲ ಸುತ್ತಲೂ ಜಾಥ ನಡೆಸಲಾಯಿತು. ಜಿಲ್ಲಾ ಪಂಚಾಯತ್, ಪುರಾತನ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಭಾರತೀಯ ಪುರಾತತ್ವ ಇಲಾಖೆ,ಸ್ಥಳೀಯ ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕರು, ಪ್ರವಾಸಿ ಮಿತ್ರರು ಹಾಗೂ ಸಿಬ್ಬಂದಿಯೊಂದಿಗೆ ಸಿಹಿಹಂಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಇಂದ್ರಮ್ಮ, ಪ್ರವಾಸಿಗರು, ಸಿಬ್ಬಂದಿ ಹಾಜರಿದ್ದರು.