Tourism provides income to rural women: Gantihole

ಬೈಂದೂರು: ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯ "ದುಡ್ಮಿ " (DUDMI - Dignity, Upliftment and Development of women through Micro Initiatives )ಯೋಜನೆಯಡಿ ಮಲ್ಪೆಯಲ್ಲಿ ಮಹಿಳೆಯರಿಗೆ "ಸಮುದಾಯ ಪ್ರವಾಸೋದ್ಯಮ ತರಬೇತಿ ಕಾರ್ಯಾಗಾರ "ವನ್ನು ಆಯೋಜಿಸಲಾಗಿತ್ತು.ಕಾರ್ಯಗಾರವನ್ನು ಉದ್ಘಾಟಿಸಿದ ಶಾಸಕರು, ಉಡುಪಿ ಜಿಲ್ಲೆ ಪ್ರವಾಸೋದ್ಯಮ ಚಟುವಟಿಕೆಗೆ ಅತ್ಯಂತ ಪೂರಕವಾದ ವಾತಾವರಣವನ್ನು ಹೊಂದಿದೆ. ಇದನ್ನು ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿ ರೂಪಿಸಿ, ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಆಚಾರ-ವಿಚಾರಗಳನ್ನು ದೇಶ-ವಿದೇಶಗಳಿಗೆ ಪರಿಚಯಿಸುವ ಮಹತ್ತರ ಕೆಲಸವಾಗಬೇಕಾಗಿದೆ. ಈ ಉದ್ದೇಶದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವ ಜೊತೆಗೆ, ಸ್ಥಳೀಯ ಮಹಿಳೆಯರಿಗೆ ಶಾಶ್ವತ ಉದ್ಯೋಗಾವಕಾಶದ ಮೂಲಕ ಅವರ ಆರ್ಥಿಕ ಸಬಲೀಕರಣವನ್ನೂ ಮಾಡಬಹುದಾಗಿದೆ. ಗ್ರಾಮೀಣ ಮಹಿಳೆಯರು ಮನೆಯ ಜವಾಬ್ದಾರಿ ಜೊತೆಗೆ ಆದಾಯದ ಮೂಲ ಹುಡುಕಿಕೊಳ್ಳುವುದು ಈ ದುಡ್ಮಿ ಯೋಜನೆಯ ಉದ್ದೇಶವಾಗಿದೆ ಎಂದರು.

ದಿನಪೂರ್ತಿ ನಡೆದ ಈ ಕಾರ್ಯಾಗಾರದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಗ್ರಾಮೀಣ ಪ್ರವಾಸೋದ್ಯಮದ ಪ್ರಸ್ತುತ ಅವಕಾಶಗಳು ಮತ್ತು ಇದರಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಯಶಸ್ಸು ಗಳಿಸುವ ಕುರಿತು ಸವಿಸ್ತಾರವಾದ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಪಂಗಳ ಸಂಜೀವಿನಿ ಒಕ್ಕೂಟಗಳಿಂದ ಒಟ್ಟು 60ಕ್ಕೂ ಹೆಚ್ಚು ಸಂಜೀವಿನಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಲ್ಪೆಯ ಪ್ಯಾರಡೈಸ್ ಐಲ್ ಬೀಚ್ ರೆಸಾರ್ಟ್ ಮುಖ್ಯಸ್ಥೆ ಪ್ರತಿಮಾ ಮನೋಹರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ತಾಲೂಕು ವ್ಯವಸ್ಥಾಪಕ ಪ್ರಶಾಂತ್ ಹಾಗೂ ವಲಯ ಮೇಲ್ವಿಚಾರಕ ಮಹೇಂದ್ರ ಉಪಸ್ಥಿತರಿದ್ದರು.