ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಲು, ಸಾಲು ರಜೆ ಹಾಗೂ ವರ್ಷಾಂತ್ಯ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕರಾವಳಿಯ ಬೀಚ್‌ಗಳು, ರಾಜ್ಯದ ಮೋಜಿನ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಾಡುತ್ತಿವೆ.ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾದ ಕೊಡಗಿನಲ್ಲಿ 35 ಸಾವಿರ ಹೋಂಸ್ಟೇಗಳು, ರೆಸಾರ್ಟ್ ಹಾಗೂ ಹೊಟೇಲ್‌ಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ರೂಂಗಳಿದ್ದು, ಜ.1ರವರೆಗೆ ಬಹುತೇಕ ಭರ್ತಿಯಾಗಿವೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ರಾಜಾಸೀಟು, ದುಬಾರೆ, ಕಾವೇರಿ ನಿಸರ್ಗಧಾಮ, ಅಬ್ಬಿ ಜಲಪಾತ ಸೇರಿ ಹಲವೆಡೆ ಪ್ರವಾಸಿಗರ ದಟ್ಟಣೆ ಕಂಡು ಬರುತ್ತಿದೆ. ಪ್ರವಾಸಿಗರಿಂದಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟ, ಮಾಂಸ ಮಾರಾಟ ಸೇರಿ ವ್ಯಾಪಾರ-ವಹಿವಾಟು ಕೂಡ ಹೆಚ್ಚುವ ನಿರೀಕ್ಷೆಯಿದೆ. ಭಾಗಮಂಡಲ ರಸ್ತೆಯ ಉಡೋತ್ ಮೊಟ್ಟೆ ಸಮೀಪದಲ್ಲಿ ಗ್ಲಾಸ್ ಬ್ರಿಡ್ಜ್ ಇದ್ದು, ಇಲ್ಲೀಗ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ. ಜನ ಏಕಾಏಕಿ ಪ್ರವಾಸಿ ತಾಣಗಳಿಗೆ ತೆರಳಿದ್ದರಿಂದ ಮೈಸೂರು- ಮಡಿಕೇರಿ, ಮೈಸೂರು -ಗೋಣಿಕೊಪ್ಪ, ಮೈಸೂರು-ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಹೆದ್ದಾರಿ, ರಸ್ತೆಗಳಲ್ಲಿ ಭಾನುವಾರವೂ ಟ್ರಾಫಿಕ್ ಜಾಮ್ ಕಂಡು ಬಂತು.
ಇನ್ನು, ವಿಶ್ವವಿಖ್ಯಾತ ಹಂಪಿಗೆ ಭಾನುವಾರ 80 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ಉದ್ದಾನ ವೀರಭದ್ರೇಶ್ವರ ದೇವಾಲಯ, ಶ್ರೀಕೃಷ್ಣ ದೇವಾಲಯ, ಉಗ್ರ ನರಸಿಂಹ ದೇಗುಲಗಳ ಕಡೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೆ, ಗೈಡ್‌ಗಳ ಕೊರತೆಯೂ ಕಂಡು ಬಂತು. ಹಂಪಿ, ಕಮಲಾಪುರ ಮತ್ತು ಹೊಸಪೇಟೆ ಸುತ್ತಮುತ್ತಲ ಹೋಟೆಲ್‌ಗಳು ಭರ್ತಿಯಾಗಿದ್ದು, ರೂಮಿಗಾಗಿ ಪ್ರವಾಸಿಗರು ಪರದಾಡುವ ದೃಶ್ಯ ಕಂಡು ಬಂತು.ಮಂತ್ರಾಲಯದಲ್ಲಿ ಗುರುರಾಯರ ಮೂಲಬೃಂದಾವನದ ದರ್ಶನಕ್ಕೆ ಸರದಿಯಲ್ಲಿ ನಿಲ್ಲುವಂತಾಗಿತ್ತು. ಬಹುತೇಕ ಭಕ್ತರು ಪುಣ್ಯಸ್ನಾನ ಮಾಡಬೇಕು ಎಂದು ನದಿಯತ್ತ ಸಾಗಿದರೂ ನೀರಿಲ್ಲದಕ್ಕೆ ಬೇಸರ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಹಿರಿಯ ನಾಗರಿಕರು, ಅಂಗವಿಕಲರು ನೇರ ದರ್ಶನ ಪಡೆಯಲು ಹರಸಾಹಸ ಪಡಬೇಕಾಯಿತು.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯವಲ್ಲದೆ, ನೆರೆಯ ಕೇರಳ ಹಾಗೂ ತಮಿಳುನಾಡಿನಿಂದಲೂ ಪ್ರವಾಸಿಗರು ಆಗಮಿಸಿದ್ದರು. ಜನದಟ್ಟಣೆಯಿಂದಾಗಿ ಭಾನುವಾರ ಸಂಜೆಯ ಬಳಿಕ ಸಫಾರಿ ಸಿಗದೆ ಪ್ರವಾಸಿಗರು ವಾಪಸ್ ಹೋದರು. ಬಂಡೀಪುರ ಸಫಾರಿಯಲ್ಲಿ ಭಾನುವಾರ ಬೆಳಗ್ಗೆ ಮತ್ತು ಸಂಜೆಯಿಂದ 7.88 ಲಕ್ಷ ರು. ಆದಾಯ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಗೋಪಾಲಸ್ವಾಮಿ ದೇವಸ್ಥಾನಕ್ಕೆ ಬೆಟ್ಟದ ತಪ್ಪಲಿನಿಂದ ಭಾನುವಾರ 10 ಬಸ್ ಬಿಡಲಾಗಿದ್ದು, ಕೆಎಸ್‌ಆರ್‌ಟಿಸಿಗೆ ಒಂದೇ ದಿನ ಸುಮಾರು 3 ಲಕ್ಷ ರು. ಆದಾಯ ಬಂದಿದೆ. ಕೊಪ್ಪಳದ ಆಂಜನಾದ್ರಿಗೆ, ಹುಲಿಗೆಮ್ಮ ದೇವಸ್ಥಾನಗಳಿಗೆ 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು.ಇನ್ನು ಗೋಕರ್ಣ, ಕಾರವಾರ, ಮಲ್ಪೆ ಸೇರಿ ಕರಾವಳಿಯ ಬೀಚ್‌ಗಳಲ್ಲಿ ಪ್ರವಾಸಿಗರು ಮೋಜು, ಮಜಾ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಇದೇ ವೇಳೆ, ಶೃಂಗೇರಿ, ಮೈಸೂರು, ಚಿಕ್ಕಮಗಳೂರು ಸೇರಿ ರಾಜ್ಯದ ಇತರೆಡೆಯ ಪ್ರವಾಸಿ ತಾಣಗಳಲ್ಲೂ ಜನದಟ್ಟಣೆ ಕಂಡು ಬರುತ್ತಿದೆ. ಇದೇ ವೇಳೆ, ಮಾಸ್ಕ್ ಧರಿಸದ ಪ್ರವಾಸಿಗರಿಂದ ಕೋವಿಡ್ ಆತಂಕ ಕೂಡ ಮನೆ ಮಾಡಿದೆ.