ಉಡುಪಿ: ಜಿಲ್ಲೆಯ ಬೀಚುಗಳಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ

| Published : Jun 13 2024, 12:54 AM IST / Updated: Jun 13 2024, 12:36 PM IST

ಸಾರಾಂಶ

ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ಭಾರಿ ಅಲೆಗಳು ಅಪ್ಪಳಿಸುತ್ತಿದೆ. ಪ್ರಕ್ಷುಬ್ಧ ಸಮುದ್ರಕ್ಕೆ ಇಳಿದರೆ ಅಪಾಯ ಸಾಧ್ಯತೆ ಇದೆ. ಈ ಹಿನ್ನೆಲೆ ಬೀಚುಗಳಲ್ಲಿ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

 ಉಡುಪಿ ;  ಕರಾವಳಿಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಉಡುಪಿ ಜಿಲ್ಲೆ ಸಮುದ್ರ ತೀರದಲ್ಲಿ ಭಾರೀ ಅಲೆಗಳು ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಾದ ಮಲ್ಪೆ, ಕಾಪು ಮುಂತಾದ ಬೀಚುಗಳಲ್ಲಿ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

ಜೊತೆಗೆ ಮಳೆಗಾಲದಲ್ಲಿ ಪ್ರವಾಸಿಗರು ಪ್ರಕ್ಷುಬ್ಧ ಸಮುದ್ರಕ್ಕೆ ಇಳಿದರೆ ಅನಾಹುತಗಳಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ತಡೆ ಬೇಲಿ ನಿರ್ಮಿಸಲಾಗಿದೆ.

ಅದರ ಮೇಲೆ ಎಚ್ಚರಿಕೆಯ ಕೆಂಪು ಬಾವುಟಗಳನ್ನು ಹಾಕಲಾಗಿದೆ. ಜೊತೆಗೆ ಪ್ರವಾಸಿಗರು ಹೆಚ್ಚಾಗಿ ಓಡಾಡುವ ಆಯಕಟ್ಟಿನ ಜಾಗದಲ್ಲಿ ಬೀಚ್ ಪ್ರವೇಶ ನಿಷೇಧ ಎಂಬ ಎಚ್ಚರಿಕೆ ಫಲಕಗಳನ್ನು ಕೂಡ ಅಳವಡಿಸಲಾಗಿದೆ.

ಕಾಪು ಸಮುದ್ರ ತೀರದ ದೀಪಸ್ತಂಭದ ಬಳಿ ಸುಮಾರು 500 ಮೀಟರ್ ಉದ್ದಕ್ಕೆ ಕಂಬಗಳನ್ನು ನೆಟ್ಟು ಹಗ್ಗಗಳನ್ನು ಕಟ್ಟಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.

ಈ ಬೀಚುಗಳಲ್ಲಿ ತರಬೇತಿ ಪಡೆದ ಜೀವ ರಕ್ಷಕರನ್ನ ನಿಯೋಜನೆ ಮಾಡಲಾಗಿದೆ. ನಿರಂತರವಾಗಿ ಎಟಿಬಿ ಸ್ಯಾಂಡ್ ಬೈಕ್ ನಲ್ಲಿ ಬೀಚಿನಲ್ಲಿ ಗಸ್ತು ತಿರುಗುವ ಜೀವ ರಕ್ಷಕರು ಪ್ರವಾಸಿಗರಿಗೆ ಮುನ್ನೆಚ್ಚರಿಕೆಗಳನ್ನ ನೀಡುತ್ತಾರೆ.

ಬೀಚ್ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಪ್ರವಾಸಿಗರಿಗೆ ನಿರಾಶೆಯಾಗುತ್ತಿದೆ. ಆದರೆ ಇತ್ತೀಚೆಗೆ ಸಮುದ್ರಕ್ಕೆ ಬಿದ್ದು ಸಾಯುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ, ಪ್ರವಾಸಿಗರ ಜೀವರಕ್ಷಣೆಯ ದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ.