ಸರಣಿ ರಜೆ ಹಿನ್ನೆಲೆಯಲ್ಲಿ ಬಿರುಬಿಸಿಲು ಲೆಕ್ಕಿಸದೆ ಶುಕ್ರವಾರದಿಂದಲೇ ಗೋಕರ್ಣಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಾರಂಭಿಸಿದ್ದು, ಶನಿವಾರ ಮತ್ತಷ್ಟು ಹೆಚ್ಜಾಗಿದೆ.

ಗೋಕರ್ಣ: ಸರಣಿ ರಜೆ ಹಿನ್ನೆಲೆಯಲ್ಲಿ ಬಿರುಬಿಸಿಲು ಲೆಕ್ಕಿಸದೆ ಶುಕ್ರವಾರದಿಂದಲೇ ಗೋಕರ್ಣಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಾರಂಭಿಸಿದ್ದು, ಶನಿವಾರ ಮತ್ತಷ್ಟು ಹೆಚ್ಜಾಗಿದೆ.

ಮಕ್ಕಳಿಗೆ ಬೇಸಿಗೆ ರಜೆ ಪ್ರಾರಂಭ ಆಗಿರುವುದರಿಂದ ಕುಟುಂಬ ಸಮೇತರಾಗಿ ಇಲ್ಲಿನ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದು, ಮಹಾಗಣಪತಿ, ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನಕ್ಕೆ ಸರತಿ ಸಾಲು ಇತ್ತು. ಭಕ್ತರಿಗೆ ಅಚ್ಚುಕಟ್ಟಿನ ವ್ಯವಸ್ಥೆಗೆ ದೇವಾಲಯದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ವಾರಾಂತ್ಯದ ರಜೆಗೆ ಬರುವ ಯುವ ಉದ್ಯೋಗಿಗಳು, ವಿದ್ಯಾರ್ಥಿಗಳು ಇಲ್ಲಿನ ಓಂ, ಕುಡ್ಲೆ, ಮುಖ್ಯ ಕಡಲತೀರ, ದುಬ್ಬನಸಶಿ ಭಾಗದ ಕಡಲತೀರದ ಹೊಟೇಲ್, ರೆಸಾರ್ಟ್‌ಗಳಲ್ಲಿ ಉಳಿದಿದ್ದು, ಸಮುದ್ರಕ್ಕಿಳಿದು ಆಟವಾಡುತ್ತಾ ಮೋಜು ಮಸ್ತಿ ಜೋರಾಗಿದೆ. ಇದರಂತೆ ಮುಖ್ಯಕಡಲ ತೀರದಲ್ಲಿ ಮಕ್ಕಳೊಂದಿಗೆ ಪಾಲಕರು ಸಂಜೆ ವೇಳೆ ವಿಹರಿಸುತ್ತ, ನೀರಿನಲ್ಲಿ ಆಟವಾಡುತ್ತ ರಜೆಯ ಮೋಜು ಜೋರಾಗಿ ನಡೆಸಿದ್ದಾರೆ. ಅವರನ್ನೆಲ್ಲ ನಿಗಾ ವಹಿಸಿ ನಿಯಂತ್ರಿಸಲು ಜೀವರಕ್ಷಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಸಂಚಾರ ವ್ಯವಸ್ಥೆ ಏರುಪೇರು: ಅಧಿಕ ಸಂಖ್ಯೆಯಲ್ಲಿ ಜನರು ಬರುವಾಗ ಉಂಟಾಗುವ ವಾಹನ ದಟ್ಟಣೆ ಸಮಸ್ಯೆ ಮುಂದುವರಿದಿದೆ. ಅಂಗಡಿಗಳ ಮುಂದೆ ವಾಹನ ನಿಲ್ಲಿಸಿ ವ್ಯಾಪಾರ ನಡೆಸುವುದು, ವಾಹನ ಎಲ್ಲೆಂದರಲ್ಲಿ ನಿಲ್ಲಿಸುವುದು ಮಾಡುತ್ತಿದ್ದು, ಇದರಿಂದ ಪಾದಚಾರಿಗಳು ಓಡಾಡಲು ಪರದಾಡುವಂತಾಗಿದೆ. ವಾರಾಂತ್ಯದ ರಜೆ ಹಾಗೂ ಸರಣಿ ರಜೆ ಬಂದಾಗ ಮಹಾಬಲೇಶ್ವರ ಮಂದಿರದ ಮೂಲಕ ಮುಖ್ಯಕಡಲತೀರಕ್ಕೆ ಸಾಗುವ ಇಕ್ಕಟ್ಟಾದ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂದು ಜನರು ಈ ಹಿಂದಿನಿಂದಲೂ ಅಗ್ರಹಿಸುತ್ತಿದ್ದು, ಆದರೆ ಇದುವರೆಗೂ ಈ ನಿಯಮ ಜಾರಿಗೊಳಿಸದ ಪರಿಣಾಮ ದೇವಾಲಯದ ಮುಂದೆಯೇ ವಾಹನ ನಿಲ್ಲಿಸುತ್ತಾ ಸಂಚಾರಕ್ಕೆ ತೊಡಕು ಮಾಡುವುದು ಮುಂದುವರಿದಿದೆ. ವಾಹನ ನಿಲ್ಲಿಸದಂತೆ ಪೊಲೀಸರು ಪ್ರವಾಸಿಗರಿಗೆ ತಿಳಿವಳಿಕೆ ನೀಡಿದರೆ ಅಲ್ಲೇ ವಾದಕ್ಕಿಳಿದು ರಂಪಾಟ ನಡೆಸುತ್ತಾರೆ. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್‌ ಹಾಗೂ ಗೃಹರಕ್ಷಕ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.