ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ನಂದಿಗಿರಿಧಾಮ ಮತ್ತು ಆದಿಯೋಗಿಯ ಇಶಾ ಧಾರ್ಮಿಕ ಸ್ಥಳಕ್ಕೆ ಭಾನುವಾರ ಬೆಳ್ಳಂ ಬೆಳಗ್ಗೆ ಲಗ್ಗೆ ಇಟ್ಟಿದ್ದರು. ನಂದಿಬೆಟ್ಟದಲ್ಲಿ ಸೂರ್ಯೋದಯ ನೋಡಲೆಂದು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ ಪ್ರವಾಸಿಗರು ಸಂಚಾರ ದಟ್ಟಣೆಯಿಂದಾಗಿರು ನಂದಿಬೆಟ್ಟದ ಕ್ರಾಸ್‌ನಲ್ಲಿಯೇ ಉಳಿಯುವಂತಾಯಿತು.ಅತ್ತ ನಂದಿಬೆಟ್ಟಕ್ಕೂ ಹೋಗಲಾಗದೇ ಇತ್ತ ವಾಪಸ್ ಆಘಲೂ ಸಾಧ್ಯವಾಗದೆ ವಾಹನ ಸವಾರರು ಗಂಟೆಗಟ್ಟಲೇ ರೋಡ್‌ನಲ್ಲಿಯೇ ಕಾಲ ಕಳೆಯುವಂತಾಯಿತು. ಗಂಟೆಗಟ್ಟಲೇ ಕಾದು- ಕಾದು ಕೆಲವರು ನಂದಿಬೆಟ್ಟಕ್ಕೆ ಹೋದರೆ ಬಹುತೇಕರು ಅಯ್ಯೋ ಸಾಕಪ್ಪ ಸಾಕು ನಂದಿಬೆಟ್ಟದ ಸಹವಾಸ ಅಂತ ಹಿಂತಿರುಗಿದರು.
ಬೆಟ್ಟದಲ್ಲಿ ಪಾರ್ಕಿಂಗ್ ಸಮಸ್ಯೆನಂದಿಬೆಟ್ಟಕ್ಕೆ ಬೆಳಗ್ಗೆ 6 ಗಂಟೆಗೆ ಪಾರ್ಕಿಂಗ್ ಭರ್ತಿಯಾಗಿತ್ತು. ಏಕಕಾಲದಲ್ಲಿ ಪ್ರವಾಸಿಗರು ಆಗಮಿಸಿದ ಹಿನ್ನಲೆ ಟಿಕೆಟ್ ಕೌಂಟರ್ ನಿಂದ ನಂದಿ ಸರ್ಕಲ್ ವರೆಗೂ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂದಿಗಿರಿಧಾಮದ ಮೇಲೆ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸ್ಥಳವಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ವಿರುದ್ಧ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು. ನಂದಿಬೆಟ್ಟದ ಮೇಲ್ಭಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ಕಾರಣ ಮೊದಲು ಬಂದ 300 ನಾಲ್ಕು ಚಕ್ರ ವಾಹನ ಹಾಗೂ 200 ಬೈಕ್‌ಗಳಿಗಷ್ಟೇ ನಂದಿಬೆಟ್ಟದ ಮೇಲ್ಭಾಗಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ. ಮೇಲಿಂದ ಒಂದು ವಾಹನ ವಾಪಸ್ ಬಂದರೆ ಮತ್ತೊಂದು ವಾಹನವನ್ನು ಮೇಲ್ಭಾಗಕ್ಕೆ ಬಿಡಲಾಗುತ್ತದೆ. ಹೀಗಾಗಿ ಸೀಮಿತ 300 ವಾಹನಗಳನ್ನು ಮೀರಿ ನೂರಾರು ಕಾರುಗಳ ಬಂದ ಕಾರಣ ನಿಂತಲ್ಲೇ ಕಾರುಗಳು ನಿಲ್ಲುವಂತಾಯಿತು.
ಈಶಾಗೂ ಹರಿದು ಪ್ರವಾಸಿಗರುಶುಕ್ರವಾರ ಗೌರಿ, ಶನಿವಾರ ಗಣೇಶನ ಹಬ್ಬವಿದ್ದು ಬಾನುವಾರ ಸಾರ್ವಜಿಕ ರಜೆ ಸೇರಿ ಮೂರು ದಿನಗಳ ಸಾಲು ಸಾಲು ರಝೆ ಇದ್ದ ಕಾರಣ ಬೆಂಗಳೂರಿನ ಐಟಿ. ಬಿಟಿ, ಖಾಸಗಿ ಮತ್ತು ಸರ್ಕಾರಿ ಉದ್ಯೋಗಿಗಳೇ ಅಲ್ಲದೇ ವ್ಯಾಪಾರಸ್ಥರಿಗೂ ಸಹಾ ಬಿಡುವು ಸಿಕ್ಕಿದ್ದು, ರಜೆಯ ಮಜಾ ಮತ್ತು ನಿಸರ್ಗದ ಪ್ರಕೃತಿಯನ್ನು ಅಸ್ವಾಧಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಸಿಗರು ಆಗಮಿಸುತ್ತಿದ್ದು, ಅದೇ ರೀತಿ ತಾಲ್ಲೂಕಿನ ಆವಲಗುರ್ಕಿಯಲ್ಲಿರುವ 112 ಅಡಿಯ ಆದಿಯೋಗಿ ಪ್ರತಿಮೆ ನೋಡಲು ಸಹಾ ಜನಸಾಗರವೇ ಹರಿದು ಬಂದಿತ್ತು.