ಉತ್ತರಕನ್ನಡಕ್ಕೆ ಪ್ರವಾಸಿಗರ ದಂಡು

| Published : Oct 14 2024, 01:26 AM IST

ಸಾರಾಂಶ

ಜಿಲ್ಲೆ, ರಾಜ್ಯ ಒಂದೇ ಅಲ್ಲದೇ ಹೊರರಾಜ್ಯದ ಜನರು ಕೂಡ ಪ್ರವಾಸಿ ತಾಣಗಳತ್ತ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಆಗಮಿಸಿದ್ದರು.

ಕಾರವಾರ: ದಸರಾ ಹಬ್ಬದ ಹಿನ್ನೆಲೆ ಎರಡು ದಿನ ಮತ್ತು ಭಾನುವಾರ ಸೇರಿ ಮೂರು ದಿನ ರಜೆಯಿದ್ದ ಕಾರಣ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಕಡಲತೀರಗಳು ಸೇರಿದಂತೆ ಜಿಲ್ಲೆಯ ಐತಿಹಾಸಿಕ, ಪುರಾಣ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಪ್ರವಾಸಿಗರ ದಂಡೆ ನೆರೆದಿತ್ತು. ಕಾರವಾರದಲ್ಲಿ ಇರುವ ಐಎನ್‌ಎಸ್ ಚಾಪೆಲ್ ಯುದ್ಧ ನೌಕೆ, ಟುಪಲೇವ್ ಯುದ್ಧ ವಿಮಾನ ನೋಡಲು ಮೂರು ದಿನದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಮುರ್ಡೇಶ್ವರಕ್ಕೆ ಮೂರು ದಿನದಲ್ಲಿ ೧೦ ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿದ್ದರು. ಜಿಲ್ಲೆ, ರಾಜ್ಯ ಒಂದೇ ಅಲ್ಲದೇ ಹೊರರಾಜ್ಯದ ಜನರು ಕೂಡ ಪ್ರವಾಸಿ ತಾಣಗಳತ್ತ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಆಗಮಿಸಿದ್ದರು. ಕಾರವಾರದ ಟ್ಯಾಗೋರ್ ಕಡಲತೀರ, ಗೋಕರ್ಣ, ಮುರ್ಡೇಶ್ವರ, ಹೊನ್ನಾವರದ ಕಡಲತೀರ ಒಳಗೊಂಡು ಬಹುತೇಕ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಮಳೆ ಆರ್ಭಟ ಕಡಿಮೆಯಾದ್ದರಿಂದ ಅರಬ್ಬಿ ಸಮುದ್ರ ಕೂಡ ಪ್ರಶಾಂತವಾಗಿದ್ದು, ಕಡಲಿಗೆ ಇಳಿದು ಮೋಜುಮಸ್ತಿ ಮಾಡಿದರು. ಮುರ್ಡೇಶ್ವರದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆ ಅಧಿಕವಾಗಿತ್ತು. ಗೋಕರ್ಣದಲ್ಲಿ ಶುಕ್ರವಾರ, ಶನಿವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಭಾನುವಾರ ತುಸು ಕಡಿಮೆಯಾಗಿತ್ತು. ಉಂಚಳ್ಳಿ, ಮಾಗೋಡ, ಸಾತೊಡ್ಡಿ, ವಿಭೂತಿ ಜಲಪಾತ, ಮಾರಿಕಾಂಬಾ, ಇಡಗುಂಜಿ ದೇವಸ್ಥಾನ ಒಳಗೊಂಡು ಐತಿಹಾಸಿಕ ಸ್ಥಳಗಳು, ಜಲಪಾತಗಳು, ಪ್ರಮುಖ ದೇವಾಲಯಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿತ್ತು. ಕಡಲ ತೀರಗಳಲ್ಲಿನ ಬೋಟ್ ರೈಡಿಂಗ್, ಜೆಟ್‌ಸ್ಕೀ, ಸ್ಪೀಡ್ ಬೋಟ್‌ಗಳು, ವಾರ್ ಶಿಫ್ ಮ್ಯೂಸಿಯಂ ಕೂಡಾ ಪ್ರಮುಖ ಆಕರ್ಷಣೀಯವಾಗಿದೆ. ನೀರುಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ

ಭಟ್ಕಳ: ಮುರುಡೇಶ್ವರ ಸಮುದ್ರಕ್ಕೆ ಈಜಲು ತೆರಳಿ ಅಲೆಗಳ ರಭಸಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ಪ್ರವಾಸಿಗರೊಬ್ಬನನ್ನು ಕರಾವಳಿ ಕಾವಲು ಪಡೆಯ ಕೆಎನ್‌ಡಿ ಹಾಗೂ ಲೈಫ್ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.ಭಾನುವಾರ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಪ್ರವಾಸಕ್ಕೆ ಮುರ್ಡೇಶ್ವರಕ್ಕೆ ಬಂದಿದ್ದ ಪುನೀತ್ ಕೆ.(೧೯) ಎಂಬಾತ ಈಜಲು ಸಮುದ್ರಕ್ಕೆ ಇಳಿದಿದ್ದ. ಈಜಲು ಬಾರದ ಈತನಿಗೆ ನೀರಿನ ಸೆಳೆತ ತಿಳಿಯದೇ ಮುಂದೆ ಮುಂದೆ ಹೋಗಿದ್ದರಿಂದ ಅಲೆಯ ರಭಸಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ತಕ್ಷಣ ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಕೆಎನ್‌ಡಿ ಸಿಬ್ಬಂದಿ ಯೋಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಅವರು ಪಾತಿ ದೋಣಿಯನ್ನು ತೆಗೆದುಕೊಂಡು ಹೋಗಿ ಮುಳುಗುತ್ತಿದ್ದ ಪುನೀತ್ ಅವರನ್ನು ರಕ್ಷಣೆ ಮಾಡಿದ್ದಾರೆ.