ಮೋಜು-ಮಸ್ತಿಗೆ ಇಳಿಯುತ್ತಿರುವ ಪ್ರವಾಸಿಗರು

ಕನ್ನಡಪ್ರಭ ವಾರ್ತೆ ಕಾರವಾರ

ಕಾರವಾರದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಅರಬ್ಬಿ ಸಮುದ್ರದ ಅಲೆಗಳು ಭೋರ್ಗರೆಯುತ್ತಿವೆ. ಸಮುದ್ರದ ಈ ರೌದ್ರಾವತಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಪ್ರವಾಸಿಗರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ತಮ್ಮ ಪ್ರಾಣದ ಹಂಗು ತೊರೆದು ಅಲೆಗಳ ನಡುವೆ ಮೋಜು-ಮಸ್ತಿಗೆ ಇಳಿಯುತ್ತಿರುವ ಪ್ರವಾಸಿಗರ ನಡವಳಿಕೆ ಈಗ ಭಾರಿ ಕಳವಳಕ್ಕೆ ಕಾರಣವಾಗಿದೆ.

ಕೇವಲ ಎರಡು ದಿನಗಳ ಹಿಂದಷ್ಟೇ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ಪ್ರವಾಸಿಗನೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ. ಆದರೂ ಇಂತಹ ಘಟನೆಯಿಂದ ಪಾಠ ಕಲಿಯದ ಪ್ರವಾಸಿಗರು ಅದೇ ತೀರದಲ್ಲಿ ಮತ್ತೆ ಅಲೆಗಳೊಂದಿಗೆ ನಿರ್ಲಕ್ಷ್ಯದಿಂದ ಆಟವಾಡುತ್ತಿರುವುದು ಕಂಡುಬರುತ್ತಿದೆ. ವಿಶೇಷವಾಗಿ ಪ್ರವಾಸಕ್ಕೆ ಬರುವ ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ಅಪಾಯಕಾರಿ ಅಲೆಗಳ ಬಳಿ ಕರೆದೊಯ್ದು ಹುಚ್ಚಾಟ ಮೆರೆಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿರುತ್ತದೆ. ಅಲ್ಲದೇ ನೀರಿನ ಆಳದಲ್ಲಿ ಸುಳಿಗಳು ಹೆಚ್ಚಿರುವುದರಿಂದ ಯಾವುದೇ ಕ್ಷಣದಲ್ಲಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಹಿನ್ನೆಲೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜೀವ ರಕ್ಷಕ ಸಿಬ್ಬಂದಿ ಕಡಲತೀರದಾದ್ಯಂತ ಅಪಾಯದ ಎಚ್ಚರಿಕೆಯಾಗಿ ಸೂಚನಾ ಫಲಕ ಹಾಗೂ ಕೆಂಪು ಬಾವುಟ ಹಾಕಿರುತ್ತಾರೆ. ಅಲ್ಲದೇ, ಜೀವರಕ್ಷಕ ಸಿಬ್ಬಂದಿ ನಿರಂತರವಾಗಿ ಸಾರ್ವಜನಿಕರಿಗೆ ನೀರಿಗೆ ಇಳಿಯದಂತೆ ಮನವಿ ಮಾಡುತ್ತಿದ್ದಾರೆ.


ಇಷ್ಟೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೂ, ಪ್ರವಾಸಿಗರು ಮಾತ್ರ ಸುರಕ್ಷತಾ ಸೂಚನೆಗಳನ್ನು ಗಾಳಿಗೆ ತೂರುತ್ತಿದ್ದಾರೆ. ಕೇವಲ ಫೋಟೋ, ರೀಲ್ಸ್ ಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟು ಸಮುದ್ರಕ್ಕಿಳಿಯುತ್ತಿರುವ ಪ್ರವಾಸಿಗರಿಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.