ಅಧಿಕಾರಿ, ಸಿಬ್ಬಂದಿ ಎಡವಟ್ಟಿನಿಂದ ಲಕ್ಷಾಂತರ ಮಂದಿಗೆ ಪರದಾಟ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿಬ್ಬಂದಿ ಎಡವಟ್ಟು, ಅಕ್ರಮದಿಂದ ಆನ್‌ಲೈನ್‌ ಬುಕ್ಕಿಂಗ್‌ ನಿಯಮ ವನ್ನೇ ಗಾಳಿಗೆ ತೂರಿದ ಪರಿಣಾಮ ಶನಿವಾರ ಲಕ್ಷಾಂತರ ಮಂದಿ ಪ್ರವಾಸಿಗರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನ ಕಿರಿದಾದ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಪರದಾಡಬೇಕಾಯಿತು.

ನಿರಂತರ ಸಾಲು-ಸಾಲು ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಲಗ್ಗೆ ಹಾಕಿದ್ದಾರೆ. ಹೀಗಾಗಿ ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆಯಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಜಾತ್ರೆ ಕಂಡುಬಂದಿದೆ.

ಆದರೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿಬ್ಬಂದಿ ಎಡವಟ್ಟು ಹಾಗೂ ಅನಧಿಕೃತ ಕೆಲಸದಿಂದ ಪ್ರಕೃತಿ ಸೌಂದರ್ಯ ಸವಿ ಯಲು ದೂರದ ಊರುಗಳಿಂದ ಆಗಮಿಸಿದ ಪ್ರವಾಸಿಗರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡು ವಂತಾಗಿದೆ.


ಮುಳ್ಳಯ್ಯನಗಿರಿ ಕಿರಿದಾದ ರಸ್ತೆಯಲ್ಲಿ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಕಾರುಗಳು ನುಗ್ಗಿದ್ದರಿಂದ ಭೀಕರ ಟ್ರಾಫಿಕ್ ಜಾಮ್ ಉಂಟಾಗಿದೆ. ಮುಖ್ಯವಾಗಿ ಪಂಡರವಳ್ಳಿ ಹಾಗೂ ಸೀತಾಳಯ್ಯನಗಿರಿ ಭಾಗದಲ್ಲಿ ವಾಹನಗಳು ಸಂಪೂರ್ಣವಾಗಿ ಸ್ತಬ್ಧ ಗೊಂಡಿದ್ದು, ಶನಿವಾರ ಬೆಳಗ್ಗೆಯಿಂದಲೇ ಪ್ರವಾಸಿಗರು ಟ್ರಾಫಿಕ್‌ನಿಂದ ಹೊರಬರಲಾರದೆ ಹೈರಾಣಾಗಿದ್ದಾರೆ.

​ಕಿರಿದಾದ ರಸ್ತೆಗಳಲ್ಲಿ ಅತಿಯಾದ ವಾಹನಗಳ ದಟ್ಟಣೆಯಿಂದ ಇಡೀ ಗಿರಿಪ್ರದೇಶ ಧೂಳು ಮತ್ತು ಹಾರ್ನ್‌ಗಳ ಸದ್ದಿನಿಂದ ತುಂಬಿ ಹೋಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮತ್ತು ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳೀಯ ಪೊಲೀಸರು ಹಾಗೂ ಚೆಕ್‌ ಪೋಸ್ಟ್ ಸಿಬ್ಬಂದಿ ತೀವ್ರ ಹರಸಾಹಸ ಪಡುತ್ತಿದ್ದಾರೆ. ಆದರೆ ವಾಹನಗಳ ಸಂಖ್ಯೆ ಮಿತಿಮೀರಿರುವುದರಿಂದ ಸಂಚಾರ ಸುಗಮಗೊಳಿಸುವುದು ಸವಾಲಾಗಿ ಪರಿಣಮಿಸಿದೆ.

ಆನ್‌ಲೈನ್‌ ಟಿಕೆಟ್‌ ನಿಯಮ ಉಲ್ಲಂಘನೆ

ಮುಳ್ಳಯ್ಯನ ಗಿರಿ, ಸೀತಾಳಯ್ಯನ ಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ಶ್ರೇಣಿಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡು ವುದಕ್ಕೆ ಕಡ್ಡಾಯವಾಗಿ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ನಲ್ಲಿ ಆನ್‌ಲೈಟ್‌ ಟಿಕೆಟ್‌ ಪಡೆಯಬೇಕು. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 1 ರಿಂದ ಸಂಜೆ 6 ವರೆಗೆ ಎರಡು ಪಾಳಿಯಲ್ಲಿ ವಾಹನ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ಪ್ರತಿ ಪಾಳಿಯಲ್ಲಿ ಸುಮಾರು 800 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆದರೆ, ಶುಕ್ರವಾರ, ಶನಿವಾರ ಈ ನಿಯಮವನ್ನು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿಬ್ಬಂದಿ ಉಲ್ಲಂಘಿಸಿ ಸಾವಿರಾರು ಸಂಖ್ಯೆಯ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಿದ ಪರಿಣಾಮ ಟ್ರಾಫಿಕ್‌ ಜಾಮ್‌ ಸಮಸ್ಯೆ ಉಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ನಾಲ್ಕೈ ದು ಕಿ.ಮೀ ಟ್ರಾಫಿಕ್‌ ಜಾಮ್‌

ಮುಳ್ಳಯ್ಯನ ಗಿರಿ ಪ್ರವೇಶಿಸುವ ಕೈಮರ ಚಕ್‌ ಪೋಸ್ಟ್‌ನಿಂದಲೇ ಟ್ರಾಫಿಕ್‌ ಜಾಮ್‌ ಶನಿವಾರ ಕಂಡು ಬಂತು. ಅಲ್ಲಿಂದ ಸುಮಾರು 4 ರಿಂದ 5 ಕಿ.ಮೀ ಉದ್ದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ದೂರ ಊರುಗಳಿಂದ ಆಗಮಿಸಿದ ಪ್ರವಾಸಿಗರು ಟ್ರಾಫಿಕ್‌ ಜಾಮ್‌ ನೋಡಿ ಬೇಸರಿಂದ ವಾಪಾಸ್ ಹೋಗುವ ದೃಶ್ಯ ಸಹ ಕಂಡು ಬಂದವು.

---ಬಾಕ್ಸ್‌---

₹1500 ಹಣ ವಸೂಲಿ?

ಅನಧಿಕೃತವಾಗಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವುದಕ್ಕೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿಬ್ಬಂದಿ ಪ್ರತಿ ವಾಹನಕ್ಕೆ ಕನಿಷ್ಠ ₹1 ಸಾವಿರ ದಿಂದ ₹1500 ವರೆಗೆ ಪ್ರವಾಸಿಗರಿಂದ ವಸೂಲಿ ಮಾಡಿ ಅವಕಾಶ ನೀಡುತ್ತಿದ್ದಾರೆ. ಹೀಗಾಗಿ, ಸಮಸ್ಯೆ ಉಂಟಾಗಿದೆ ಎಂಬ ದೂರು ಕೇಳಿ ಬಂದಿವೆ.

ಫೋಟೋ

ಚಂದ್ರದ್ರೋಣ ಪರ್ವತದ ಪ್ರದೇಶದಲ್ಲಿ ಶನಿವಾರ ಉಂಟಾದ ಟ್ರಾಫಿಕ್‌ ಜಾಮ್‌.