30ರಂದು ತೋವಿವಿ 13ನೇ ಘಟಿಕೋತ್ಸವ

| Published : Sep 28 2024, 01:25 AM IST

ಸಾರಾಂಶ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸೆ.30ರಂದು ಬೆಳಿಗ್ಗ 11 ಗಂಟೆಗೆ ಬಾಗಲಕೋಟೆ ತೋವಿವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸೆ.30ರಂದು ಬೆಳಿಗ್ಗ 11 ಗಂಟೆಗೆ ಬಾಗಲಕೋಟೆ ತೋವಿವಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.

ತೋವಿವಿ 13ನೇ ಘಟಿಕೋತ್ಸವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾರಂಭವನ್ನು ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉದ್ಘಾಟಿಸುವರು. ಕೇಂದ್ರ ಸರಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ.ಎನ್.ಕಲೈಸೆಲ್ವಿ, ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು ಎಂದರು.

ಈ ಘಟಿಕೋತ್ಸವವದಲ್ಲಿ ಬಿಎಸ್ಸಿ (ಹಾನರ್ಸ್) ತೋಟಗಾರಿಕೆ ಮತ್ತು ಬಿಟೆಕ್ (ಆಹಾರ ತಂತ್ರಜ್ಞಾನ) 577 ವಿದ್ಯಾರ್ಥಿಗಳು, ಎಂಸ್ಸಿ (ತೋಟಗಾರಿಕೆ) ಸ್ನಾತಕೋತ್ತರ ಪದವಿಯಲ್ಲಿ ಬರುವ 10 ವಿಭಾಗಗಳಲ್ಲಿ ಉತ್ತೀರ್ಣರಾದ 101 ಪದವಿ ವಿದ್ಯಾರ್ಥಿಗಳಿಗೆ ಹಾಗೂ ಪಿಎಚ್‌ಡಿ ಕಾರ್ಯಕ್ರಮದಲ್ಲಿ ಬರುವ 10 ವಿಭಾಗಗಳ 44 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, ರಾಜ್ಯದಲ್ಲಿರುವ ಎಲ್ಲ ತೋಟಗಾರಿಕೆ ಮಹಾವಿದ್ಯಾಲಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಅರ್ಹ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ದಾನಿಗಳ ಚಿನ್ನದ ಪದಕಗಳನ್ನು ನೀಡಲಾಗುವುದು. ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ 23 ಹಾಗೂ ದಾನಿಗಳ 57 ಸೇರಿ ಒಟ್ಟು 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.

2024-25ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯ ಆಲಮೇಲದಲ್ಲಿ ಸ್ಥಾಪನೆಗೊಂಡಿದೆ. ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಸ್ತುತ 306 ಶಿಕ್ಷಕರು ಹಾಗೂ 450 ಬೋಧಕೇತರ ಸಿಬ್ಬಂದಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತೋವಿವಿ ಶಿಕ್ಷಣ ನಿರ್ದೇಶಕ ಎನ್‌.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಡಾ.ಫಕ್ರುದ್ಧೀನ್, ವಿಸ್ತರಣಾ ನಿರ್ದೇಶಕ ಟಿ.ಬಿ.ಅಳ್ಳೊಳ್ಳಿ ಹಾಗೂ ರಿಜಿಸ್ಟಾರ್‌ ಮಹಾದೇವ ಮುರಗಿ ಸೇರಿದಂತೆ ಇತರರು ಇದ್ದರು.