ಸಾರಾಂಶ
ಜು.4ರಂದು ಬಿಡುಗಡೆಗೊಂಡಿರುವ ‘ಜಂಗಲ್ ಮಂಗಲ್’ ಚಿತ್ರವು ಯಶಸ್ವಿಯಾಗಿ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ ಎಂದು ಚಿತ್ರದ ನಿರ್ದೇಶಕ ರಕ್ಷಿತ್ ಕುಮಾರ್ ಹೇಳಿದರು.
ಶಿವಮೊಗ್ಗ: ಜು.4ರಂದು ಬಿಡುಗಡೆಗೊಂಡಿರುವ ‘ಜಂಗಲ್ ಮಂಗಲ್’ ಚಿತ್ರವು ಯಶಸ್ವಿಯಾಗಿ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ ಎಂದು ಚಿತ್ರದ ನಿರ್ದೇಶಕ ರಕ್ಷಿತ್ ಕುಮಾರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹೊಸ ತಂಡದೊಂದಿಗೆ ಚಿತ್ರ ಮಾಡಿದ್ದು, ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಮಡಪಾಡಿ ಎಂಬ ಸಣ್ಣ ಹಳ್ಳಿ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಕಾಡಿನಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ನಡೆದಿದೆ ಎಂದರು.ಸುತ್ತ ದಟ್ಟ ಕಾಡಿನಿಂದ ಸುತ್ತುವರೆದು, ಕಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಸಸ್ಪೆನ್ಸ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಹಾಡುಗಳಿಲ್ಲ, ಒಂದು ಗಂಟೆ ಮೂವತ್ತು ನಿಮಿಷದ ಚಿತ್ರ ಇದಾಗಿದ್ದು, ಇಬ್ಬರು ಸಂಗೀತ ನಿರ್ದೇಶನ ನೀಡಿದ್ದಾರೆ ಎಂದರು.ಸುನಿ ಸಿನಿಮಾಸ್(ಸಿಂಪಲ್ ಸುನಿ) ಅರ್ಪಿಸುವ, ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ’ಜಂಗಲ್ ಮಂಗಲ್’ ಚಿತ್ರದ ತಾರಾಗಣದಲ್ಲಿ ಯಶ್ ಶೆಟ್ಟಿ, ಉಗ್ರಂ ಮಂಜು, ಹರ್ಷಿತಾ ರಾಮಚಂದ್ರ, ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಚಂದ್ರಹಾಸ್ ಉಳ್ಳಾಲ್ ಇದ್ದಾರೆ. ಪ್ರಸಾದ್ ಛಾಯಾಗ್ರಹಣ, ಪ್ರಸಾದ್ ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಮನು ಶೇಡ್ಗಾರ್ ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.ಚಿತ್ರ ನೋಡುಗರಲ್ಲಿ ಕುತೂಹಲ ಕೆರಳಿಸುತ್ತದೆ. ಮನೆ ಮಂದಿಯೆಲ್ಲಾ ಕುಳಿತು ನೋಡುವ ಸದಭಿರುಚಿ ಚಿತ್ರ ಇದಾಗಿದೆ. ಪ್ರೇಕ್ಷಕರು ಸಿನಿಮಾ ವೀಕ್ಷಿಸುವ ಮೂಲಕ ಹೊಸಬರ ತಂಡಕ್ಕೆ ಬೆಂಬಲಿಸಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಉಗ್ರಂ ಮಂಜು ಮಾತನಾಡಿ, ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಕಷ್ಟಪಟ್ಟಾದರೂ ಇಷ್ಟ ಪಟ್ಟು ಚಿತ್ರ ಮಾಡಿದ್ದೇವೆ. ಬಿಡುಗಡೆಯ ನಂತರ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಒಂದು ಒಳ್ಳೆಯ ಚಿತ್ರ ಮಾಡಿದ್ದೇವೆ ಎಂಬ ಹೆಮ್ಮೆ ಇದೆ. ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಯಶಸ್ವಿ ಎರಡನೇ ವಾರ ಮುಗಿಸಿ, ಮೂರನೇ ವಾರಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಚಿತ್ರದ ನಟಿ ಹರ್ಷಿತಾ ರಾಮಚಂದ್ರ, ರಘು, ಮುರಳಿ, ಶಶಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.