ಸಾರಾಂಶ
ತಾಲೂಕಿನಲ್ಲಿ ಯುವನಿಧಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ
ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಆಗ್ರಹಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನಲ್ಲಿ ಯುವನಿಧಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಪ್ರಚಾರದ ಕೊರತೆ ಕಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಫಾರೂಕ್ ಡಾಲಾಯತ್ ಹೇಳಿದರು.ಪಟ್ಟಣದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ಯುವನಿಧಿಯ ಯೋಜನೆಯ ಪ್ರಚಾರ ಕಡಿಮೆ ಇದ್ದು, ಈ ಯೋಜನೆಯ ಸದ್ಬಳಕೆಯಾಗುತ್ತಿಲ್ಲ. ಮಾಹಿತಿಯ ಕೊರತೆ ಇದೆ. ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡುವ ಮೂಲಕ ಪ್ರಚಾರ ಮಾಡಿ ಯೋಜನೆಯ ಲಾಭ ಪಡೆಯುವಂತೆ ನೋಡಿಕೊಳ್ಳುವ ಕೆಲಸ ಮಾಡಬೇಕು. ಗ್ಯಾರೆಂಟಿ ಯೋಜನೆಗಳು ಸಮರ್ಪಕವಾಗಿ ಜನ ಸಾಮಾನ್ಯರಿಗೆ ತಲುಪಬೇಕು. ಕೆಲವರಿಗೆ ಯೋಜನೆಗಳು ಮರೀಚಿಕೆಯಾಗುತ್ತಿದ್ದು, ಅಧಿಕಾರಿಗಳು ಸಮರ್ಪಕವಾದ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಅಮರೇಶ ಗಾಂಜಿ ಮಾತನಾಡಿ, ತಾಲೂಕಿನಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಕಾಲೇಜು ಸಮಯಕ್ಕೆ ಬಸ್ ಓಡಿಸಬೇಕು. ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರನ್ನು ದೋಷಿಷಬಾರದು, ಅವರೊಂದಿಗೆ ಗೌರವಯುತವಾಗಿ ಸೌಜನ್ಯದಿಂದ ಮಾತನಾಡಬೇಕು. ಹನುಮಸಾಗರ, ತಾವರಗೇರಾ ಬಸ್ ನಿಲ್ದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಇದರಿಂದ ಮಹಿಳೆಯವರಿಗೆ ತೊಂದರೆಯಾಗುತ್ತದೆ. ಅಲ್ಲಿ ಹೆಚ್ಚಿನ ಶೌಚಾಲಯ ನಿರ್ಮಾಣ ಮಾಡಬೇಕು ಎಂದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಗತಿ ಸಾಧಿಸಬೇಕು ಎಂದರು.ನೋಟಿಸ್ ನೀಡಿ:
ಆಹಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಾರ್ಯವೈಖರಿಯು ತೃಪ್ತಿದಾಯಕವಾಗಿರುವುದಿಲ್ಲ. ಸಭೆಗೆ ಸರಿಯಾಗಿ ಬರುತ್ತಿಲ್ಲ. ತಮ್ಮ ಸಿಬ್ಬಂದಿಗಳನ್ನು ಕಳುಹಿಸುತ್ತಾರೆ. ಅವರಿಗೆ ಮಾಹಿತಿ ಕೊರತೆಯಿರುತ್ತದೆ. ಹಾಗಾಗಿ ಸಭೆ ಸಂಪೂರ್ಣವಾಗುವುದಿಲ್ಲ. ಕೂಡಲೇ ಅವರಿಗೆ ನೋಟಿಸ್ ನೀಡಿ ಸಭೆಗೆ ಬರುವಂತೆ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಬೇಕು ಎಂದು ಗ್ಯಾರಂಟಿ ಸಮಿತಿಯ ಕೆಲ ಸದಸ್ಯರು ಆಗ್ರಹಿಸಿದರು.ಸಭೆಯಲ್ಲಿ ಡಿಪೋ ವ್ಯವಸ್ಥಾಪಕ ಸುಂದರಗೌಡ ಪಾಟೀಲ್, ಜೆಸ್ಕಾಂನ ರವಿಕುಮಾರ ಹಿರೇಮಠ, ಯುವನಿಧಿ ಯೋಜನೆಯ ಅಧಿಕಾರಿ ಶಿವಯೋಗಿ ಸೇರಿದಂತೆ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರು ಇದ್ದರು.