ಪೊಲೀಸ್ ಇಲಾಖೆಗೆ ಟೋಯಿಂಗ್ ವಾಹನ ಹಸ್ತಾಂತರ

| Published : Nov 13 2025, 01:15 AM IST

ಸಾರಾಂಶ

ರಾಣಿಬೆನ್ನೂರು ನಗರದಲ್ಲಿ ಬುಧವಾರ ಶಾಸಕರ ಅನುದಾನ ಅಡಿಯಲ್ಲಿ ಖರೀದಿಸಿದ ನೂತನ ಟೋಯಿಂಗ್ ವಾಹನಕ್ಕೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ ನೀಡಿದರು.

ರಾಣಿಬೆನ್ನೂರು: ಸುಗಮ ಸಂಚಾರ ವ್ಯವಸ್ಥೆಯಿಂದ ನಗರಕ್ಕೆ ಹೆಚ್ಚಿನ ಕೈಗಾರಿಕೆ ಉದ್ಯಮಗಳು ಬರಲಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ನನ್ನ ಅನುದಾನದಲ್ಲಿ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದಲ್ಲಿ ಬುಧವಾರ ಶಾಸಕರ ಅನುದಾನ ಅಡಿಯಲ್ಲಿ ಖರೀದಿಸಿದ ನೂತನ ಟೋಯಿಂಗ್ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರಿ ಎಂಬ ಖ್ಯಾತಿಯನ್ನು ರಾಣಿಬೆನ್ನೂರು ನಗರ ಹೊಂದಿದೆ. ಆದರೆ ಅನೇಕ ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಿಂದಾಗಿ ನಗರದಲ್ಲಿ ಒಂದಿಲ್ಲೊಂದು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇದರ ಬಗ್ಗೆ ಚಿಂತಿಸಿ ಜನರಿಗೆ ಸಂಚಾರ ನಿಯಮಗಳ ಅರಿವಿನ ಜತೆಗೆ ಅದರ ಬಗ್ಗೆ ಜಾಗೃತಿ ವಹಿಸಲು ನಗರಕ್ಕೆ ಟೋಯಿಂಗ್ ವಾಹನ ಅವಶ್ಯಕತೆಯಿದೆ ಇತ್ತು. ನಗರದಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ಸಾರ್ವಜನಿಕರು ಸುಲಲಿತವಾಗಿ ಕೆಲಸವಾಗಬೇಕು ಎಂಬ ಉದ್ದೇಶವಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಜನರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ರಾಣಿಬೆನ್ನೂರು ಪ್ರತಿನಿತ್ಯವೂ ಬೆಳೆಯುತ್ತಿರುವ ವಾಣಿಜ್ಯ ನಗರವಾಗಿದೆ. ಇದರಿಂದ ನಿತ್ಯವೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಅಲ್ಲದೆ ವಾಹನ ಸವಾರರು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಇಂತಹ ಉಲ್ಲಂಘನೆ ಮಾಡಿದವರ ಮೇಲೆ ನಿಗಾ ಇಟ್ಟು, ವಾಹನ ಎತ್ತಿ ಸಾಗಿಸಲಾಗುವುದು. ವಾಹನ ಸವಾರರಿಗೆ ಎಚ್ಚರಿಕೆ ನೀಡಬೇಕು ಎಂಬ ಉದ್ದೇಶ ಹಾಗೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿದೆ ಎಂದರು.

ಆನಂತರ ಸಾರ್ವಜನಿಕರಿಗೆ ಟೋಯಿಂಗ್ ವಾಹನ ಬಗ್ಗೆ ಅರಿವು ಮೂಡಿಸಲು ನಗರದ ಕೆ.ಇ.ಬಿ. ಗಣೇಶ ದೇವಸ್ಥಾನದಿಂದ ಆರಂಭವಾದ ಜಾಥಾ ಬಸ್ ನಿಲ್ದಾಣ, ಡಾ. ಪುನೀತರಾಜಕುಮಾರ ವೃತ್ತ, ಅಬ್ದುಲ್ ಕಲಾಂ ವೃತ್ತ, ಅಂಚೆ ವೃತ್ತ, ಚಕ್ಕಿಮಿಕ್ಕಿ ವೃತ್ತ, ದುರ್ಗಾ ವೃತ್ತ, ಕುರುಬಗೇರಿ ಕ್ರಾಸ್, ಹಳೇ ಪಿ.ಬಿ. ರಸ್ತೆಯ ಮೂಲಕ ದೇವರ ದಾಸಿಮಯ್ಯ ವೃತ್ತದ ಬಳಿ ಯುದ್ಧ ಟ್ಯಾಂಕರ್ ಆವರಣದ ವರೆಗೂ ಜಾಥಾ ಸಾಗಿತು.

ಡಿವೈಎಸ್‌ಪಿ ಜೆ. ಲೋಕೇಶಪ್ಪ, ಸಿಪಿಐಗಳಾದ ಸಿದ್ದೇಶ, ನಾಗಯ್ಯ ಕಾಡದೇವರ, ವೆಂಕಟರೆಡ್ಡಿ ಭಾಗಿಯಾಗಿದ್ದರು.