ಲೋಕಾಯುಕ್ತರ ಅಹವಾಲು ಸ್ವೀಕಾರ ಸಭೆಯಲ್ಲಿ ದೂರುಗಳ ಸುರಿಮಳೆ

| Published : Nov 14 2024, 12:48 AM IST

ಸಾರಾಂಶ

ನಗರಸಭೆಯಿಂದ ಮೂಲ ಸೌಕರ್ಯಗಳು ದೊರಕುತ್ತಿಲ್ಲ. ಕಾರಣ ಸಂಘವು ನಗರಸಭೆಗೆ 72 ಲಕ್ಷ ರು.ಗಳ ಕಂದಾಯ ಬಾಕಿ ಉಳಿಸಿಕೊಂಡಿದೆ

ಕನ್ನಡಪ್ರಭ ವಾರ್ತೆ ಹುಣಸೂರು ಪಟ್ಟಣದ ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆ.40ಕ್ಕೂ ಹೆಚ್ಚು ಅರ್ಜಿಗಳನ್ನು ಸಾರ್ವಜನಿಕರು ಅಧಿಕಾರಿಗಳಿಗೆ ಸಲ್ಲಿಸಿದರು. ಪಟ್ಟಣದ ಕಲ್ಕುಣಿಕೆ ಮಾರಿಗುಡಿ ಬೀದಿಯ ಶೇಖರ್ ಮನವಿ ಸಲ್ಲಿಸಿ, ಪಟ್ಟಣದ ಕುರಿ ಉಣ್ಣೆ ನೇಕಾರರ ಮತ್ತು ಮಾರಾಟಗಾರರ ಸಂಘದ ಸುಪರ್ದಿಯಲ್ಲಿರುವ 10 ಎಕರೆ ಭೂಮಿಯಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಮೂರು ದಶಕಗಳಾದರೂ ಈ ಕುಟುಂಬಗಳಿಗೆ ಮನೆ ಖಾತೆಯಾಗಿಲ್ಲ. ನಗರಸಭೆಯಿಂದ ಮೂಲ ಸೌಕರ್ಯಗಳು ದೊರಕುತ್ತಿಲ್ಲ. ಕಾರಣ ಸಂಘವು ನಗರಸಭೆಗೆ 72 ಲಕ್ಷ ರು.ಗಳ ಕಂದಾಯ ಬಾಕಿ ಉಳಿಸಿಕೊಂಡಿದೆ. ಈ ಕುರಿತು ನಗರಸಭೆ ಸಂಘಕ್ಕೆ ನೋಟೀಸ್ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಆ ಮೂಲಕ ನಿವಾಸಿಗಳಿಗೆ ಮನೆಯ ಖಾತೆ ಮಾಡಿಕೊಡುವ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಕೋರಿದರು.ಈ ಕುರಿತು ಸಂಬಂಧಪಟ್ಟ ಅಧಿಕಾರಿಯ ಗಮನಕ್ಕೆ ತರಬೇಕೆಂದು ಲೋಕಾಯುಕ್ತ ಡಿವೈಎಸ್ಪಿ ಮಾಲತೇಶ್ ನಗರಸಭೆ ಪೌರಾಯುಕ್ತೆ ಕೆ. ಮಾನಸ ಅವರಿಗೆ ಸೂಚಿಸಿದರು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ದೂರು ನೀಡಿ, ಬೆಂಕಿಪುರ ಗ್ರಾಮದ ಸರ್ವೇ ನಂ.60, 61 ಮತ್ತು 47ರಲ್ಲಿ ಇರುವ ದರ್ಖಾಸ್ತು ಭೂಮಿಯಲ್ಲಿ ಸರ್ಕಾರ ಎಸ್ಸಿ ಮತ್ತು ಎಸ್ಟಿ ಜನಾಂಗದ ರೈತರಿಗೆ ಮಂಜೂರಾಗಿದ್ದ ದಾಖಲೆಗಳು ಕಾಣೆಯಾಗಿವೆ ಎಂಬ ಕಾರಣವೊಡ್ಡಿ ಬಿಳಿಕೆರೆ ಆರ್ಐ ಮಂಜುನಾಥ್ ಮೈಸೂರಿನ ಕೆಲವರಿಗೆ ಖಾತೆ ಮಾಡಿಸಿಕೊಟ್ಟಿದ್ದಾರೆ. ಈ ಕುರಿತು ತಾವು ಪ್ರಶ್ನಿಸಿದ್ದಕ್ಕೆ ತಮ ಮೇಲೆ ದುಂಡಾವರ್ತನೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ. ಅಕ್ರಮವಾಗಿ ಖಾತೆ ಮಾಡಿ ಬಂಡವಾಳ ಶಾಹಿಗಳಿಗೆ ಖಾತೆ ಮಾಡಿಕೊಟ್ಟಿರುವ ಆರ್.ಐ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಹಾಗೂ ಶೋಷಿತರಿಗೆ ಅವರ ಜಮೀನು ಕೊಡಿಸಬೇಕೆಂದು ಕೋರಿದರು.ಕಂದಾಯ ಇಲಾಖೆ ಉಪ ತಹಸೀಲ್ದಾರ್ ನರಸಿಂಹಯ್ಯ ಅವರಿಗೆ ಈ ಕುರಿತು ವರದಿ ನೀಡಲು ಡಿವೈಎಸ್ಪಿ ಸೂಚಿಸಿದರು. ಆರ್.ಟಿಐ ಕಾರ್ಯಕರ್ತರಿಗೆ ಕಡಿವಾಣ ಹಾಕಿನಗರಸಭೆ ಮಾಜಿ ಸದಸ್ಯ ಜಾಕೀರ್ ಹುಸೇನ್ ಮಾತನಾಡಿ, ನಗರಸಭೆಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಹಾವಳಿ ಜಾಸ್ತಿಯಾಗಿದೆ. ಒಬ್ಬೊಬ್ಬ ಕಾರ್ಯಕರ್ತ ಪ್ರತಿದಿನ ಹತ್ತಾರು ಮಾಹಿತಿ ಕೋರಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದರಿಂದ ನಗರಸಭೆ ಆಡಳಿತದಲ್ಲಿ ಗೊಂದಲ ಹೆಚ್ಚುತ್ತಿದೆ. ವಿನಾಕಾರಣ ಖಾಸಗಿ ವ್ಯಕ್ತಿಗಳ ಆಸ್ತಿಪಾಸ್ತಿಗಳ ಕುರಿತು ಮಾಹಿತಿ ಕಲೆ ಹಾಕಿ ಅವರಿಗೆ ಧಮಕಿ ಹಾಕುವ ಕಾರ್ಯ ಎಗ್ಗಿಲ್ಲದೇ ನಡೆದಿದೆ. ಒಂದೇ ಒಂದು ಕಟ್ಟಡ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಕೋರಿದರು.ಮಾಹಿತಿ ಕೇಳುವ ಹಕ್ಕು ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಮಾಹಿತಿ ಕೇಳುವ ವ್ಯಕ್ತಿ ಸಂಬಂಧ ಪಟ್ಟ ಕಚೇರಿಯ ಮಾಹಿತಿ ಹಕ್ಕು ಅಧಿಕಾರಿಯ ಬಳಿ ಮಾತ್ರ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬೇಕು. ಅವರು ಮಾಹಿತಿ ಕೇಳುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅನುಚಿತವಾಗಿ ನಡೆದುಕೊಂಡರೆ ಪೊಲೀಸರಿಗೆ ದೂರು ನೀಡಿ ಕ್ರಮವಹಿಸಿರಿ ಎಂದು ದೂರುದಾರರಿಗೆ ತಿಳಿಸಿದರು.ಸಭೆಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಗಳಾದ ರೂಪಶ್ರೀ, ಉಮೇಶ್, ನಗರಸಭೆ ಪೌರಾಯುಕ್ತೆ ಕೆ. ಮಾನಸ, ಎಇಇ ಶರ್ಮಿಳಾ, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ, ನಗರಠಾಣೆ ಎಸ್ಐ ಜಮೀರ್ ಅಹಮದ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.