ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಿಡಿ ಹೊತ್ತಿಕೊಂಡಿದ್ದು, ಕಿಡಿಯಿಂದ ಮೇವಿಗೆ ಬೆಂಕಿ ತಗುಲಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಮೇವಿನ ರಾಶಿಗೆ ವ್ಯಾಪಿಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಗುಡಿಬಂಡೆ: ಮೇವು ತುಂಬಿಕೊಂಡು ಆಂಧ್ರಪ್ರದೇಶದ ಹಿಂದೂಪುರಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಾಗಿ ಬೆಂಕಿ ಹೊತ್ತಿಕೊಂಡ ಘಟನೆ ಪಟ್ಟಣದ ರಾಮಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ಉಲ್ಲೋಡು ಕಡೆಯಿಂದ ಜೋಳದ ಮೇವು ತುಂಬಿಸಿಕೊಂಡು ಟ್ರ್ಯಾಕ್ಟರ್ ತೆರಳುತ್ತಿದ್ದ ವೇಳೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿಗೆ ತಾಗಿದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಿಡಿ ಹೊತ್ತಿಕೊಂಡಿದ್ದು, ಕಿಡಿಯಿಂದ ಮೇವಿಗೆ ಬೆಂಕಿ ತಗುಲಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಮೇವಿನ ರಾಶಿಗೆ ವ್ಯಾಪಿಸಿದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರು ಚಾಲಕನಿಗೆ ನೆರವಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಟ್ರ್ಯಾಕ್ಟರ್ ಅನ್ನು ಪಟ್ಟಣದಿಂದ ದೂರದ ಪ್ರದೇಶಕ್ಕೆ ಕೊಂಡೊಯ್ದು, ಅದರಲ್ಲಿದ್ದ ಮೇವನ್ನು ಕೆಳಗಿಳಿಸಲಾಯಿತು. ಘಟನೆಯಿಂದ ರಾಮಪಟ್ಟಣ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದರು. ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಯಿತು.