ಸಾರಾಂಶ
ಕನಕಪುರ: ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಬಾಲಕ ಸಾವನಪ್ಪಿರುವ ಮನಕಲುಕುವ ಘಟನೆ ಅರಳಗಡಕಲು ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕೋಡಿಹಳ್ಳಿ ಹೋಬಳಿ ಬಿಜ್ಜಳ್ಳಿ ಗ್ರಾಮದ ಸ್ವಾಮಿ ಅವರ ಪುತ್ರ ಚಂದನ್ (10) ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಸ್ವಾಮಿ ಅವರು ಕೋಡಿಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ಮೃತ ಬಾಲಕ ಕೋಡಿಹಳ್ಳಿ ಹಿಪ್ರೋ ಕ್ಯಾಂಪಸ್ ಶಾಲೆಯಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ಶಾಲೆಗೆ ರಜೆ ಇದ್ದುದರಿಂದ ತಮ್ಮ ತಾಯಿಯ ಮನೆ ಅರಳಗಡಕಲು ಗ್ರಾಮಕ್ಕೆ ಹೋಗಿದ್ದ ಸಮಯದಲ್ಲಿ ಜಮೀನು ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದ್ದು, ಮೇಲೆ ಕುಳಿತಿದ್ದ ಬಾಲಕ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಕೋಡಿಹಳ್ಳಿ ಪೊಲೀಸ್ ಠಾಣೆಗೆ ಮೃತರ ಪೋಷಕರು ಟ್ರ್ಯಾಕ್ಟರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.