ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಾಕಿಸ್ತಾನ ಒಂದು ನರಹಂತಕ ದೇಶವಾಗಿದ್ದು, ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಯಾಗಿದೆ ಎಂದು ಔಷಧಿ ವ್ಯಾಪಾರಿಗಳ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಮೆಡಿಕಲ್ ಸುಬ್ರಹ್ಮಣ್ಯ ಹೇಳಿದರು.ಶ್ರೀ ಚನ್ನಕೇಶವ ದೇವಾಲಯದ ಬಳಿ ವರ್ತಕರ ಸಂಘ, ಔಷಧಿ ವ್ಯಾಪಾರಿಗಳ ಸಂಘ ಹಾಗೂ ಡಾ. ರಾಜ್‌ಕುಮಾರ್ ಸಂಘ ಹಾಗೂ ಸಾರ್ವಜನಿಕರು ಸೇರಿದಂತೆ ಪಹಲ್ಗಾಮ್ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ದೇಶದ ನಾಗರಿಕರನ್ನು ಪ್ರವಾಸಿಗರನ್ನು ಈ ನರ ರಾಕ್ಷಸರು ಘೋರವಾಗಿ ಹತ್ಯೆ ಮಾಡಿರುವುದನ್ನು ನೋಡಿದರೆ ನಮ್ಮ ಶತ್ರು ರಾಷ್ಟ್ರಗಳು ನಾಯಿಗಳು ಎಂಬುದು ಸಾಬೀತಾಗುತ್ತದೆ. ರಾಜಕೀಯ ಮಾಡುವುದಾರೆ ನಮ್ಮ ದೇಶ ಮಾತೃಭೂಮಿ ನಾವು ಋಣ ತೀರಿಸಬೇಕು. ಆದರೆ ಇಲ್ಲಿಯೇ ಹುಟ್ಟಿ ಇಲ್ಲಿ ಬೆಳೆದ ಕೆಲ ರಾಜಕಾರಣಿಗಳಿಗೆ ಆ ದೇಶವನ್ನು ಓಲೈಕೆ ಮಾಡುವವರಿಗೆ ನಾಚಿಕೆಯಾಗಬೇಕು. ನಮ್ಮ ರಾಜ್ಯದ ಮಂತ್ರಿಯೊಬ್ಬರು ಪಾಪಿಸ್ಥಾನ ಪಾಪ ಎನ್ನುವವರು ತಾಕತ್ತಿದ್ದರೆ ಅಲ್ಲೇ ಹೋಗಿ ನೆಲೆಸಲಿ. ಪಾಪಿಗಳನ್ನು ಬಗ್ಗು ಬಡಿಯಲು ಹೊರಟಿರುವ ಪ್ರಧಾನಿಯವರಿಗೆ ನಾವೆಲ್ಲರೂ ಬೆಂಬಲ ಸೂಚಿಸೋಣ ಎಂದರು.ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ನಮ್ಮ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಯನ್ನು ಬುಡಸಮೇತ ಮಟ್ಟಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಅವುಗಳ ನಡುವೆ ದೇಶದ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಕೇವಲ ಹಿಂದೂ ಧರ್ಮದ ಬಗ್ಗೆ ಸ್ಪಷ್ಟೀಕರಣ ಮಾಡಿಕೊಂಡು ಅತ್ಯಂತ ಕ್ರೂರವಾಗಿ ಸುಮಾರು 26 ಜನರನ್ನು ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಎಲ್ಲರನ್ನೂ ಸಮಾನರಾಗಿ ಕಾಣುವ ಸನಾತನ ಹಿಂದೂ ಧರ್ಮದ ಸುಭದ್ರವಾದ ಈ ನಮ್ಮ ದೇಶದಲ್ಲಿ ಭಯೋತ್ಪಾದಕ ಹಾಗೂ ಉಗ್ರಗಾಮಿಗಳ ವಿರುದ್ಧ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ ಮತ್ತು ಇಂಥಹ ಅಮಾನವೀಯ ಘಟನೆ ಮುಂದೆಂದೂ ಮರುಕಳಿಸಬಾರದು. ಅದಕ್ಕಾಗಿ ಪ್ರಧಾನ ಮಂತ್ರಿಗಳ ನಿರ್ಧಾರಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕು. ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ರಾಷ್ಟ್ರವಾದ ಪಾಕಿಸ್ತಾನವನ್ನು ವಿಶ್ವದ ಭೂಪಟದಿಂದಲೇ ಕಿತ್ತೊಗೆಯಬೇಕು. ಭಯೋತ್ಪಾದನೆ ಎಲ್ಲಿ ತನಕ ಇರುತ್ತದೆಯೋ ಅಲ್ಲಿಯವರೆಗೆ ಆ ದೇಶದಲ್ಲಿ ಶಾಂತಿ ನೆಮ್ಮದಿಯಿಂದ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದರು.
ವರ್ತಕರ ಸಂಘದ ಅಧ್ಯಕ್ಷ ಗಿರಿಯಪ್ಪ ಶೆಟ್ಟಿ ಮಾತನಾಡಿ, ಜಾತಿ ಭೇದ ಎನ್ನದೆ ಎಲ್ಲರೂ ಭಾರತೀಯರೇ ಎಂದು ಸಹೋದರತ್ವದಿಂದ ಇಲ್ಲಿ ಬಾಳುತ್ತಿದ್ದು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ನಮ್ಮಲ್ಲಿ ಕ್ರೂರತ್ವ ತುಂಬುತ್ತಿರುವ ಇರುವ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು. ಇಂತಹ ಹೀನಕೃತ್ಯ ಎಸಗಿರುವ ಆ ದೇಶಕ್ಕೆ ನಾವೆಲ್ಲರೂ ಖಂಡಿಸುವ ಮೂಲಕ ಪ್ರಧಾನಿಯವರನ್ನು ಬೆಂಬಲಿಸೋಣವೆಂದರು.ಕಾಂಗ್ರೆಸ್ ಮುಖಂಡ ಬಿ ಎಲ್ ಧರ್ಮೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ ಅನಂತ ಸುಬ್ಬರಾಯ್, ವೇದ ಬ್ರಹ್ಮ ಕೆ ,ಆರ್. ಮಂಜುನಾಥ್, ಔಷಧಿ ವ್ಯಾಪಾರಿಗಳ ಸಂಘದ ನಾಗಶೆಟ್ಟಿ, ವಾಸುದೇವ ಧನ್ಯ, ಮೋಹನ್ ಕುಮಾರ್, ಸುಬ್ರಹ್ಮಣ್ಯ, ಮಂಜುನಾಥ್, ಗಣೇಶ್, ಇತರರು ಹಾಜರಿದ್ದರು.