ಕಡಿಮೆ ಬೆಲೆಗೆ ಮೆಕ್ಕೆಜೋಳ ಖರೀದಿಸುತ್ತಿರುವ ವ್ಯಾಪಾಸ್ಥರು

| Published : Nov 13 2025, 01:30 AM IST

ಸಾರಾಂಶ

ದರ ಇಲ್ಲವೆಂದು ಕೇವಲ ₹1800 ಖರೀದಿ ನಡೆಯುತ್ತಿದೆ.

ಹೂವಿನಹಡಗಲಿ: ಮೆಕ್ಕೆಜೋಳಕ್ಕೆ ಕೇಂದ್ರ ₹2400 ಬೆಂಬಲ ಬೆಲೆ ಘೋಷಣೆಯಾಗಿದೆ. ಆದರೆ, ಸ್ಥಳೀಯ ವ್ಯಾಪಾರಸ್ಥರು ಕ್ವಿಂಟಲ್‌ಗೆ ₹1800ಗೆ ಬೇಕಾಬಿಟ್ಟಿ ಖರೀದಿಸುತ್ತಿದ್ದಾರೆ. ಈ ಕುರಿತು ಕೂಡಲೇ ಎಪಿಎಂಸಿ ಕಾಯ್ದೆಯಡಿ ಅಧಿಕಾರಿ ಕ್ರಮಕ್ಕೆ ಮುಂದಾಗಬೇಕೆಂದು ಅಖಂಡ ಕರ್ನಾಟಕ ರಾಜ್ಯ ಸಂಘದ ರಾಜ್ಯ ಸಂಘಟನೆ ಕಾರ್ಯದರ್ಶಿ ಗೋಣಿ ಬಸಪ್ಪ ಒತ್ತಾಯಿಸಿದ್ದಾರೆ.ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ ಜಿ.ಸಂತೋಷಕುಮಾರ ಅಧ್ಯಕ್ಷತೆಯಲ್ಲಿ ಜರುಗಿದ ರೈತರು, ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಸಿಕ್ಕಾಪಟ್ಟೆ ಮೆಕ್ಕೆಜೋಳ ಬೆಳೆ ಬಂದಿದೆ, ಆದರೆ ದರ ಪಾತಾಳಕ್ಕೆ ಕುಸಿದಿದೆ, ಯಾವ ವ್ಯಾಪಾರಸ್ಥರು ಎಪಿಎಂಸಿ ಕಾಯ್ದೆ ಅಡಿ ವ್ಯಾಪಾರ ಮಾಡುತ್ತಿಲ್ಲ, ಪ್ರತಿ ಕ್ವಿಂಟಲ್‌ಗೆ 4 ರಿಂದ 5 ತೂಕ ಬಾದ್‌ ತೆಗೆಯುತ್ತಾರೆ, ಸರಿಯಾದ ತೂಕವಿಲ್ಲ, ರಸ್ತೆಯಲ್ಲೆ ಖರೀದಿ ತೂಕ ಮಾಡುತ್ತಾರೆ, ದರ ಇಲ್ಲವೆಂದು ಕೇವಲ ₹1800 ಖರೀದಿ ನಡೆಯುತ್ತಿದೆ. ಆದರಿಂದ ಎಲ್ಲ ವ್ಯಾಪಾರಸ್ಥರು ಎಪಿಎಂಸಿ ಪ್ರಾಂಗಣದಲ್ಲೇ ಖರೀದಿ ಮಾಡದಿದ್ದರೆ ವ್ಯಾಪಾರಸ್ಥರ ವಿರುದ್ಧ ಶಿಸ್ತು ಕ್ರಮ ವಹಿಸಿ ಅವರ ಪರವಾನಗಿ ರದ್ದು ಮಾಡಿ ಎಂದು ಆಗ್ರಹಿಸಿದರು.

ದರ ಕುಸಿತ ಕಂಡರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ, ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ಹೇಳಿದರು.

ಅಕ್ಕಪಕ್ಕದ ಜಿಲ್ಲೆಗಳಲ್ಲಿ ಯಾವುದೇ ಕಾರಣಕ್ಕೂ ಮೆಕ್ಕೆಜೋಳ ಕ್ವಿಂಟಲ್‌ ಗೆ ₹2 ಸಾವಿರದೊಳಗೆ ಯಾರು ಖರೀದಿ ಮಾಡಬಾರದೆಂಬ ಆದೇಶ ಹೊರಡಿಸಿದ್ದಾರೆ. ಇಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ, ರೈತರ ಹಿತ ಕಾಯಬೇಕಾದ ಅಧಿಕಾರಿಗಳು ಏನು ಮಾಡುತ್ತೀರಿ, ಇದೇ ಪರಿಸ್ಥಿತಿ ಮುಂದುವರಿದರೆ ಬಳ್ಳಾರಿಯ ಡಿಡಿ ಕಚೇರಿಗೆ ಬೀಗ ಹಾಕುವ ಜತೆಗೆ, ಎಲ್ಲ ತಾಲೂಕು ಕೇಂದ್ರದ ಎಪಿಎಂಸಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಪಿಎಂಸಿ ಕಾಯ್ದೆ ಬಗ್ಗೆ ವ್ಯಾಪರಸ್ಥರಿಗೆ ಭಯವೇ ಇಲ್ಲ. ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳದಿರುವುದೇ ಇದಕ್ಕೆ ಕಾರಣ, ತೆರಿಗೆ ಪಾವತಿಯಾಗಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದು ದೂರಿದರು.

ಈಗಾಗಲೇ 4 ಜನ ವ್ಯಾಪಾರಸ್ಥರಿಗೆ ನೋಟಿಸ್‌ ನೀಡಿ ದಂಡ ವಸೂಲಿ ಮಾಡಿದ್ದೇವೆ. ₹1 ಕೋಟಿಗೂ ಅಧಿಕ ತೆರಿಗೆ ಸಂಗ್ರಹಿಸಲಾಗಿದೆ. ಬಳ್ಳಾರಿ ಡಿಡಿ ಜತೆ ಮಾತನಾಡಿ, ₹2 ಸಾವಿರ ಒಳಗೆ ಖರೀದಿ ಮಾಡುವಂತಿಲ್ಲ ಎಂಬ ಆದೇಶವನ್ನು ಹೊರಡಿಸುತ್ತೇವೆಂದು ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ಹೇಳಿದರು.

ಮುಜ್ಜೂರ್‌ ರೆಹಮಾನ್‌ ಮಾತನಾಡಿ, ₹250 ಇದ್ದ ಯೂರಿಯಾ ₹700 ಮಾರಿ. ಅದರ ಜತೆಗೆ ಒಂದು ವಿಷದ ಬಾಟಲಿ ಕೊಟ್ಟು ಕುಡೀರಿ ಅಂತ ಕೈಗೆ ಕೊಟ್ರಿ. ಮೆಕ್ಕೆಜೋಳ ತಮಗೆ ಬೇಕಾದ ಬೆಲೆಗೆ ಖರೀದಿ ಮಾಡುವ ವ್ಯಾಪಾರಸ್ಥರ ವಿರುದ್ಧವೂ ಕ್ರಮವಿಲ್ಲ. ನಿಮಗೆ ಸರ್ಕಾರಿ ಸಂಬಳ ಬರುತ್ತೆ; ನಮಗ್ಯಾವ ಸಂಬಳವೂ ಬರಲ್ಲ. ಬೆಳೆ ಮಾರಿ ಬಂದ ಹಣದಲ್ಲೇ ಬದುಕು ನಡೆಸಬೇಕು. ಎಪಿಎಂಸಿಯಲ್ಲಿ ಖರೀದಿ ನಡೆಯುತ್ತಿಲ್ಲ. ಹೊರಗೆ ವ್ಯಾಪಾರ ನಡೆಯುತ್ತಿದೆ. ಕಾಯ್ದೆ ವಿರುದ್ಧ ನಡೆಯುವ ವ್ಯಾಪಾರಸ್ಥರ ಪರವಾನಗಿ ರದ್ದು ಮಾಡಿ ನೋಡಿ ಹೇಗೆ ದಾರಿ ಬರುತ್ತಾರೆ. ಹಳ್ಳಿಯಲ್ಲಿ ಅಧಿಕಾರಿಗಳು ತಿರುಗಾಡಿದರೆ ಮೋಸದ ದಂಧೆ ಗೊತ್ತಾಗುತ್ತದೆ. ನೀವು ಕಚೇರಿಯಲ್ಲೇ ಕುಳಿತುಕೊಂಡರೆ ಹೇಗೆ? ರೈತರ ಬದುಕು ಬೀದಿಗೆ ಬಂದಿದೆ. ರೈತರು ಸಂಕಷ್ಟದಲ್ಲಿದ್ದಾರೆ ಈಗಲ್ಲಾದರೂ ಕ್ರಮಕ್ಕೆ ಮುಂದಾಗಿ ಎಂದು ಒತ್ತಾಯಿಸಿದರು.

ತಾಲೂಕಿನ 126 ವ್ಯಾಪಾರಸ್ಥರಿಗೆ ನೋಟಿಸ್‌ ನೀಡಿ ಕಾಯ್ದೆಯಂತೆ ವ್ಯಾಪಾರ ಮಾಡಲು ಸೂಚನೆ ನೀಡಲಾಗುವುದು, ಮೇಲಧಿಕಾರಿಗಳ ಜತೆಗೆ ಚರ್ಚಿ 2 ಸಾವಿರ ಒಳಗೆ ಖರೀದಿ ಮಾಡುವಂತಿಲ್ಲ ಎಂದು ಆದೇಶಿಸಲಾಗುವುದು ಎಂದು ತಿಮ್ಮಪ್ಪ ನಾಯಕ ಹೇಳಿದರು.

ಕಾಯ್ದೆ ಉಲ್ಲಂಘನೆ ಮಾಡುವ ವ್ಯಾಪಾರಸ್ಥರಿಗೆ ನೋಟಿಸ್‌ ನೀಡಿ ಅವರ ಪರವಾನಿಗಿ ರದ್ದು ಪಡಿಸಿ ಎಂದು ಕಾರ್ಯದರ್ಶಿಗೆ ತಹಸೀಲ್ದಾರ್‌ ಸಂತೋಷಕುಮಾರ್‌ ಸೂಚಿಸಿದರು.

ಸಂಘದ ತಾಲೂಕ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಕಾಳಪ್ಪ, ಉಪಾಧ್ಯಕ್ಷ ನಾಗೇಂದ್ರಪ್ಪ, ವಿಠಲ ನಾಯ್ಕ, ಮಂಜುನಾಯ್ಕ, ಗಿರೀಶ ನಾಯ್ಕ, ದುರ್ಗಪ್ಪ, ಫಕ್ಕೀರಪ್ಪ, ಗನಿಸಾಬ್‌, ದಾವಲ್‌ಸಾಬ್‌, ಕೆ.ಮಂಜುನಾಥ ಸೇರಿದಂತೆ ಕೊಟ್ಟೂರು ಎಪಿಎಂಸಿ ಕಾರ್ಯದರ್ಶಿ ಈರಣ್ಣ ಇತರರಿದ್ದರು.