ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ಕಸಾಯಿ ಖಾನೆ ತೆರವು ಮಾಡಲು ಬಂದ ವೇಳೆ, ಅಂಗಡಿಕಾರರು ನಮಗೆ ಬೇರೆ ಸ್ಥಳ ನೀಡುವ ವರೆಗೆ ಯಾವುದೇ ಕಾರಣಕ್ಕೂ ಇಲ್ಲಿಯ ಅಂಗಡಿಗಳನ್ನು ತೆರವು ಮಾಡಲು ಬಿಡುವುದಿಲ್ಲ ಎಂದರು.
ಧಾರವಾಡ:
ಎರಡು ದಿನಗಳ ಹಿಂದಷ್ಟೇ ಇಲ್ಲಿಯ ಶಿವಾಜಿ ವೃತ್ತದ ಬಳಿಯ ಕಸಾಯಿ ಖಾನೆಯಲ್ಲಿ ಅಕ್ರಮ ಗೋವು ಸಂಗ್ರಹಿಸಲಾಗುತ್ತಿದೆ ಎಂದು ಬಜರಂಗದಳ ಪ್ರತಿಭಟಿಸಿದ ಬೆನ್ನಲ್ಲಿಯೇ ಪಾಲಿಕೆಯಿಂದ ಕಸಾಯಿಖಾನೆ ತೆರವಿಗೆ ಗುರುವಾರ ಮುಂದಾದಾಗ ಮಾಂಸ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ಕಸಾಯಿ ಖಾನೆ ತೆರವು ಮಾಡಲು ಬಂದ ವೇಳೆ, ಅಂಗಡಿಕಾರರು ನಮಗೆ ಬೇರೆ ಸ್ಥಳ ನೀಡುವ ವರೆಗೆ ಯಾವುದೇ ಕಾರಣಕ್ಕೂ ಇಲ್ಲಿಯ ಅಂಗಡಿಗಳನ್ನು ತೆರವು ಮಾಡಲು ಬಿಡುವುದಿಲ್ಲ ಎಂದರು. ಈ ವೇಳೆ ಒಂದು ಹಂತಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಮಾರಾಟಗಾರರ ಮಧ್ಯೆ ವಾಗ್ವಾದ ನಡೆಯಿತು.
ಆಗ ಸ್ಥಳಕ್ಕೆ ಬಂದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮತ್ತು ಪಾಲಿಕೆ ಸದಸ್ಯ ಶಂಭು ಸಾಲಿಮನಿ ಪಾಲಿಕೆ ಅಧಿಕಾರಿಗಳ ನಡೆಗೆ ವಿರೋಧ ವ್ಯಕ್ತಪಡಿಸಿದ್ದು, ಏಕಾಏಕಿ ಈ ರೀತಿಯ ಕ್ರಮಕೈಗೊಂಡರೆ ಹೇಗೆ? ಬ್ರಿಟಿಷರ ಕಾಲದಲ್ಲಿ ಈ ಜಾಗೆಯನ್ನು ನೀಡಲಾಗಿದೆ. ನಮಗೆ ಬೇರೆ ಜಾಗೆ ನೀಡಬೇಕು. ಅಲ್ಲಿಯ ವರೆಗೆ ನಾವು ಈ ಜಾಗೆ ಬಿಟ್ಟು ಕದಲುವುದಿಲ್ಲ ಎಂದು ತಿಳಿಸಿದರು.ನಂತರ ಇಸ್ಮಾಯಿಲ್ ತಮಟಗಾರ ಮಾತನಾಡಿ, ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಇದೇ ರೀತಿಯ ಸಮಸ್ಯೆ ಉದ್ಭವ ಆಗುತ್ತಲೇ ಇದೆ. ಬೇರೆ ಜಿಲ್ಲೆಗಳಲ್ಲಿ ಕಸಾಯಿ ಖಾನೆಗಳು ಎಂದಿನಂತೆ ನಡೆದಿವೆ. ಆದರೆ, ಶಾಂತ ನಗರಿ ಧಾರವಾಡದಲ್ಲಿಯೇ ಹಬ್ಬದ ಸಂದರ್ಭದಲ್ಲಿ ಗಲಾಟೆ ನಡೆಸಲಾಗುತ್ತಿದೆ. ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಸಾಯಿ ಖಾನೆ ಸ್ಥಳಾಂತರ ಮಾಡಲು ನಮಗೆ ತೊಂದರೆ ಇಲ್ಲ. ಆದರೆ, ಬೇರೆ ಕಡೆಯಲ್ಲಿ 5 ಎಕರೆ ಜಾಗೆ ನೀಡಿ. ಅಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದರೆ ನಾವು ಅಲ್ಲಿಗೆ ಹೋಗಲು ಸಿದ್ಧ. ಆದರೆ, ಏಕಾಏಕಿ ತೆರವು ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದರು. ಸ್ಥಳೀಯರ ವಿರೋಧಕ್ಕೆ ಮಣಿದ ಪಾಲಿಕೆ ಅಧಿಕಾರಿಗಳು ಬಂದ ದಾರಿಗೆ ಮರಳಿದರು.