ಶಾಸಕ ಪ್ರಸಾದ ಅಬ್ಬಯ್ಯ ಅವರು ಸರ್ವ ಜನಾಂಗದವರೊಂದಿಗೆ ಅತ್ಯುತ್ತಮ ಒಡನಾಡಿಯಾಗಿದ್ದುಕೊಂಡು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಹುಬ್ಬಳ್ಳಿ:

ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸಾದ ಅಬ್ಬಯ್ಯ ಅವರಿಗೆ ಡಿ.ಕೆ. ಶಿವಕುಮಾರ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಗುರುವಾರ ಇಲ್ಲಿನ ದುರ್ಗದಬೈಲ್‌ ವೃತ್ತದಲ್ಲಿ ಬೀದಿಬದಿ ವ್ಯಾಪಾರಸ್ಥರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಅವರು ಸರ್ವ ಜನಾಂಗದವರೊಂದಿಗೆ ಅತ್ಯುತ್ತಮ ಒಡನಾಡಿಯಾಗಿದ್ದುಕೊಂಡು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೆಚ್ಚಾಗಿ ಸ್ಲಂಗಳನ್ನೇ ಹೊಂದಿರುವ ಹುಬ್ಬಳ್ಳಿ ಪೂರ್ವ ಕ್ಷೇತ್ರದಲ್ಲಿ ಅಬ್ಬಯ್ಯ ಶಾಸಕರಾಗಿ ಆಯ್ಕೆಯಾದ ಬಳಿಕ ಮಾದರಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಾನುರಾಗಿದ್ದಾರೆ ಎಂದರು.

ಅಬ್ಬಯ್ಯ ಅವರಿಗೆ ಕಳೆದ ಬಾರಿ ಸಚಿವರಾಗಿ ಆಯ್ಕೆಯಾಗುವ ಎಲ್ಲ ಅವಕಾಶವಿತ್ತು. ಆದರೆ, ಹೈಕಮಾಂಡ್‌ ನೀಡಿದ ಸೂಚನೆಯಂತೆ ಅವರು ನಡೆದುಕೊಳ್ಳುವ ಮೂಲಕ ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ಅವರ ಹೆಸರು ಬರುವ ನಿರೀಕ್ಷೆಯಿತ್ತು. ಆದರೆ, ಹೆಸರಿಲ್ಲದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ವಿಸ್ತರಣೆ ವೇಳೆ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸುಮಾರು 20 ನಿಮಿಷಕ್ಕೂ ಹೆಚ್ಚುಕಾಲ ದುರ್ಗದ ಬೈಲ್‌ ವೃತ್ತ ಬಂದ್‌ ಮಾಡಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬೀದಿ ವ್ಯಾಪಾರಸ್ಥರು. ಕಾಂಗ್ರೆಸ್‌ ಹೈಕಮಾಂಡ್‌ ಆದಷ್ಟು ಬೇಗನೆ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನೂರಾರು ಬೀದಿ ಬದಿ ವ್ಯಾಪಾರಸ್ಥರು, ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.