ಪಾರಂಪರಿಕ ಬಯಲಾಟ ಕಲೆಗೆ ಆಧುನಿಕ ಸ್ಪರ್ಶ ಅಗತ್ಯ

| Published : Dec 27 2023, 01:31 AM IST

ಪಾರಂಪರಿಕ ಬಯಲಾಟ ಕಲೆಗೆ ಆಧುನಿಕ ಸ್ಪರ್ಶ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದಿನ ಪರಂಪರೆಯ ಬಯಲು ನಾಟಕ ಕಲೆಗೆ ಆಧುನಿಕ ಸ್ಪರ್ಶ ಅಗತ್ಯವಿದೆ. ನಿರಂತರ ಶ್ರಮದಿಂದ ಹೊಸರೂಪದ ಬಯಲುನಾಟಕವನ್ನು ರಂಗಪ್ರವೇಶಕ್ಕೆ ತರಲು ಸಾಧ್ಯ.

ಹಗರಿಬೊಮ್ಮನಹಳ್ಳಿ: ವಚನಕಾರ ಸಿದ್ದರಾಮ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ, ನೀರಾವರಿ ಭೂಮಿ ಹೆಚ್ಚಿಸುವುದರ ಜತೆಗೆ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಏಳಿಗೆ ಶ್ರಮಿಸಿದರು ಎಂಬುದನ್ನು ಚಲವಾದಿ ಸುರೇಶ ಚಮಲಾದೇವಿ ಬಯಲುನಾಟಕದಲ್ಲಿ ಅತ್ಯಂತ ಮನೋಜ್ಞವಾಗಿ ಅಭಿನಯಿಸಿ ಜನಮೆಚ್ಚುಗೆಗೆ ಪಾತ್ರರಾದರು.

ತಾಲೂಕಿನ ತಂಬ್ರಹಳ್ಳಿ ಬಯಲು ರಂಗಮಂದಿರದಲ್ಲಿ ಕರ್ನಾಟಕ ನಾಮಕರಣ ೫೦ನೇ ವರ್ಷದ ಸಂಭ್ರಮೋತ್ಸವ ಪ್ರಯುಕ್ತ, ಕರ್ನಾಟಕ ಏಕೀಕರಣ ಟ್ರಸ್ಟ್ ಗೊಟಗೋಡಿ ಹಾಗೂ ಬಯಲು ಬೆಳಗು ಬಯಲಾಟ ಪ್ರಾಯೋಗಿಕ ಅಧ್ಯಯನ ಕೇಂದ್ರ ತಂಬ್ರಹಳ್ಳಿ ಇವರ ಸಹಯೋಗದಲ್ಲಿ ನಡೆದ ಚಾಮಲಾದೇವಿ ಬಯಲಾಟಕ್ಕೆ ಪಾತ್ರಧಾರಿಗಳು ಜೀವ ತುಂಬಿದರು.

ಮಹಾರಾಷ್ಟ್ರದ ರಾಣಿಯಾಗಿದ್ದ ಚಾಮಲಾದೇವಿ ವಚನಕಾರರನ್ನು ಸಂಘಟಿಸಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಎತ್ತಿಹಿಡಿದ ಪಾತ್ರದಲ್ಲಿ ಅಭಿನಯಿಸಿದ ಬಡಿಗೇರ್ ಕೃಷ್ಣ ಮಹಿಳೆಯರು ನಾಚುವಂತೆ ಚಾಮಲಾದೇವಿ ಪಾತ್ರವನ್ನು ನಿರ್ವಹಿಸಿದರು. ಕೃಷ್ಣನ ಸ್ತ್ರೀಕುಣಿತದ ಹೆಜ್ಜೆ ನೋಡುಗರ ಮನಸೂರೆಗೊಂಡಿತು. ಅನುಭವ ಮಂಟಪದಲ್ಲಿ ವೈದ್ಯಕೀಯ ಚಾರಣಿಯಾಗಿ ಸೇವೆ ಸಲ್ಲಿಸಿದ ದಾನಮ್ಮದೇವಿ ಪಾತ್ರದಲ್ಲಿ ಮಡಿವಾಳರ ಶಶಿ ವಿಶೇಷವಾಗಿ ಅಭಿನಯಿಸಿದರು.

ಬಸವಣ್ಣನ ಪಾತ್ರದಲ್ಲಿ ಚಲವಾದಿ ಚಂದ್ರು, ಸಿಪಾಯಿ ಹುಲುಗಪ್ಪ ಅಲ್ಲಮಪ್ರಭು, ಗೋಪಾಲನ ಪಾತ್ರದಲ್ಲಿ ಸಿಪಾಯಿ ಪೃಥ್ವಿ, ಸಾರಥಿಯಾಗಿ ಹನಸಿ ನಾಗರಾಜ ಉತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಜ್ಯೋತಿ ಬಸವರಾಜ ಬಯಲಾಟದ ರಂಗ ನಿರ್ದೇಶಕನಾಗಿ ಉತ್ತಮವಾಗಿ ನಿರ್ವಹಿಸಿದರು.

ಹಿಮ್ಮೇಳದಲ್ಲಿ ಚಿಲಗೋಡು ರಾಮಸ್ವಾಮಿ, ಪೂಜಾರ್ ನಾಗಪ್ಪ, ಚುಟ್ಟದ ಬಸಪ್ಪ, ಬಾಣದ ಬಯ್ಯಪ್ಪ, ರಾಜಸಾಬ್ ಬಯಲಾಟದ ಪಾತ್ರಧಾರಿಗಳಿಗೆ ಉತ್ತಮ ಸಾಥ್ ನೀಡಿದರು. ಕಮ್ಮಾರ್ ಸುರೇಂದ್ರಪ್ಪ ವಯೋಲಿನ್ ನುಡಿಸಿದರು.

ಕಾಯಕ್ರಮವನ್ನು ಉಪನ್ಯಾಸಕ ಜಿ.ಪಿ. ಪೂಜಾರ್ ಉದ್ಘಾಟಿಸಿ ಮಾತನಾಡಿ, ಬಯಲು ನಾಟಕ ಕಲೆ ಮನಸ್ಸಿಗೆ ಮುದ ನೀಡುತ್ತದೆ. ಇಂದಿನ ಕಾಲಘಟ್ಟದಲ್ಲಿ ಬಯಲು ನಾಟಕದಲ್ಲಿ ವಿಷಯ ಆಸಕ್ತಿ ತೋರಿಸುವ ಅಗತ್ಯತೆ ಇದೆ ಎಂದರು.

ಚಾಮಲಾದೇವಿ ಬಯಲುನಾಟಕ ರಚಿಸಿದ ಏಕೀಕರಣ ಟ್ರಸ್ಟ್‌ ಅಧ್ಯಕ್ಷೆ ಅಕ್ಕಿ ಸುಜಾತ ಮಾತನಾಡಿ, ಹಿಂದಿನ ಪರಂಪರೆಯ ಬಯಲು ನಾಟಕ ಕಲೆಗೆ ಆಧುನಿಕ ಸ್ಪರ್ಶ ಅಗತ್ಯವಿದೆ. ನಿರಂತರ ಶ್ರಮದಿಂದ ಹೊಸರೂಪದ ಬಯಲುನಾಟಕವನ್ನು ರಂಗಪ್ರವೇಶಕ್ಕೆ ತರಲು ಸಾಧ್ಯ ಎಂದರು.

ಸಾಹಿತಿ ಹುರುಕಡ್ಲಿ ಶಿವಕುಮಾರ ಮಾತನಾಡಿ, ಬಯಲುನಾಟಕವನ್ನು ಜನಮಾನಸದಲ್ಲಿ ಉಳಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ. ಅಕ್ಕಿ ಸುಜಾತ ಅವರ ಸ್ವರಚಿತ ಚಾಮಲಾದೇವಿ ನಾಟಕ ಅತ್ಯಂತ ಸತ್ವಯುತವಾಗಿದ್ದು, ಶರಣರ ಪಾತ್ರಗಳನ್ನು ಸುಂದರವಾಗಿ ಕಟ್ಟಿ ಸಮಾಜದ ಬದಲಾವಣೆಗೆ ಪೂರಕವಾಗಿದೆ ಎಂದರು.

ಪ್ರೌಢಶಾಲಾ ಶಿಕ್ಷಕ ಅಕ್ಕಿ ಬಸವರಾಜ, ಹಿರಿಯ ಕಲಾವಿದ ಚುಕ್ಕನಕಲ್ಲು ರಾಮಣ್ಣ ಮಾತನಾಡಿದರು.

ಸ್ಪರ್ಧೆಯ ವಿಜೇತರಿಗೆ ಬಹುಮಾನ:

ಇದಕ್ಕೂ ಮುನ್ನ ನಡೆದ ಸ್ತ್ರೀ ಪುರುಷ ಬಯಲುನಾಟಕ ಕುಣಿತ ಸ್ಪರ್ಧೆಯಲ್ಲಿ ೧೪ ಕಲಾವಿದರು ಭಾಗವಹಿಸಿದ್ದರು. ಸ್ತ್ರೀ ಕುಣಿತದಲ್ಲಿ ಸಿಗೇನಹಳ್ಳಿ ನೂರ್‌ಸಾಬ್ ಪ್ರಥಮ, ಗೂಡ್ಲಾನೂರು ವಸಂತಕುಮಾರ ದ್ವಿತೀಯ, ಗಡಿಹಳ್ಳಿ ನಿಂಗಪ್ಪ ತೃತೀಯ, ಪುರುಷ ಕುಣಿತದಲ್ಲಿ ಸಿಗೇನಹಳ್ಳಿ ರಾಜಸಾಬ್ ಪ್ರಥಮ, ಕಡ್ಲಬಾಳು ಗ್ರಾಮದ ಬ್ಯಾಟಿ ಲಕ್ಷ್ಮಪ್ಪ ದ್ವಿತೀಯ, ನಂದಿಬಂಡಿ ಕರಿಯಪ್ಪ ತೃತೀಯ ಸ್ಥಾನ ಪಡೆದರು. ವಿಜೇತ ಕಲಾವಿದರಿಗೆ ದಿ. ಅಕ್ಕಿ ಬಸೆಣ್ಣಿ, ದಿ. ಜಂಗಸನಹಳ್ಳಿ ದಿಂಡಬಸಪ್ಪ, ಪಟ್ಟಣಶೆಟ್ಟಿ ಭರಮಜ್ಜ ಇವರ ಹೆಸರಿನಲ್ಲಿ ಪ್ರಶಸ್ತಿ ಜತೆಗೆ ಪ್ರೋತ್ಸಾಹಧನ ನೀಡಲಾಯಿತು. ಇದೇ ವೇಳೆ ಗ್ರಾಮದ ೩೦ಕ್ಕೂ ಹೆಚ್ಚು ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಬಯಲು ಬೆಳಗು ಅಧ್ಯಯನ ಕೇಂದ್ರದ ಅಧ್ಯಕ್ಷ ಕೊಳ್ಳಿ ಶೇಷಾರೆಡ್ಡಿ, ಉಪಾಧ್ಯಕ್ಷ ಕಡ್ಡಿ ಕೊಟ್ರೇಶ, ಕೊಟಿಗಿ ರಾಜಶೇಕರ, ಬಣಕಾರ ಮಲ್ಲಿಕಾರ್ಜುನ, ತಳವಾರ ಪಾಂಡುರಂಗ, ಸೊಬಟಿ ಹರೀಶ್, ಮಡಿವಾಳರ ಮರಿಯಪ್ಪ, ಸಿಂದೋಗಿ ನಾಗರಾಜ, ಎಂ.ಪಿ. ಪರಮೇಶ್, ಬಾಬುಸಾಬ್, ಸಂಡೂರು ಮೆಹಬೂಬ್, ಕೋರಿ ಪ್ರದೀಪ್, ಇತರರಿದ್ದರು. ಕಾರ್ಯಕ್ರಮವನ್ನು ಪಟ್ಟಣಶೆಟ್ಟಿ ಸುರೇಶ, ಅಕ್ಕಿ ಬಸವರಾಜ, ಮಂಜುನಾಥ ನಿರ್ವಹಿಸಿದರು.