ರಾಂ ಅಜೆಕಾರು ಕಾರ್ಕಳ: ತುಳುನಾಡಿನಲ್ಲಿ ಆಟಿ ತಿಂಗಳು ಎಂದರೆ ಮಳೆ, ಸಂಪ್ರದಾಯ ಮತ್ತು ಜನಪದ ಸಂಸ್ಕೃತಿಯ ಸೊಗಡಿನ ಕಾಲ. ಹಿಂದೆ ಆಟಿ ತಿಂಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದ ಕಾರಣ ಜನರು ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು. ಆ ಸಮಯದಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಒಟ್ಟಾಗಿ ವಿವಿಧ ಸಾಂಪ್ರದಾಯಿಕ ಆಟವಾಡುತ್ತಿದ್ದರು. ಆದರೆ ಕಾಲ ಬದಲಾಗಿದ್ದು, ಮಳೆಯ ಪ್ರಮಾಣ ಕಡಿಮೆಯಾಗಿರುವುದು, ನಗರೀಕರಣ, ಆಧುನಿಕ ಜೀವನಶೈಲಿ ಹಾಗೂ ಮೊಬೈಲ್ ಸಂಸ್ಕೃತಿಯ ಪ್ರಭಾವದಿಂದ ಈ ಆಟಗಳು ನಿಧಾನವಾಗಿ ಮರೆಯಾಗುತ್ತಿವೆ.
ಆಟಿ ತಿಂಗಳಲ್ಲಿ ದೊರೆಯುವ ವಿವಿಧ ಕಾಯಿ ಹಾಗೂ ಬೀಜಗಳನ್ನು ಬಳಸಿ ಆಡುತ್ತಿದ್ದ ಆಟಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದವು. ಈ ಕಾಯಿಗಳನ್ನು ವರ್ಷಗಳ ಕಾಲ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ. ನೀರಿಗೆ ಬಿದ್ದರೆ ಮೊಳಕೆಯೊಡೆಯುವ ಗುಣವೂ ಇವುಗಳಿಗೆ ಇದೆ. ಇಂತಹ ನೈಸರ್ಗಿಕ ವಸ್ತುಗಳನ್ನೇ ಆಟದ ಸಾಮಗ್ರಿಗಳಾಗಿ ಬಳಸುವುದು ಆ ಕಾಲದ ವಿಶೇಷತೆಯಾಗಿತ್ತು.ಆಟಿ ತಿಂಗಳಲ್ಲಿ ಮಾತ್ರ ಕೆಲವು ಆಟಗಳನ್ನು ಆಡುವ ಸಂಪ್ರದಾಯವೂ ಇತ್ತು. ಅಕ್ಕ-ತಂಗಿಯರು ಕೆಲವು ಆಟಗಳನ್ನು ಆಡಬಾರದು, ಜೋಡಿ ಆಟಗಳನ್ನು ಗಂಡ-ಹೆಂಡತಿ ಆಡಬಾರದು ಎಂಬ ಅಲಿಖಿತ ಸಾಮಾಜಿಕ ನಿಯಮಗಳೂ ಗ್ರಾಮೀಣ ಸಮಾಜದಲ್ಲಿ ಪಾಲನೆಯಲ್ಲಿದ್ದವು.ಚೆನ್ನೆಮಣೆ ಆಟ: ಚೆನ್ನೆಮಣೆ ಆಟವು ಈ ಸಂಪ್ರದಾಯದ ಪ್ರಮುಖ ಆಟವಾಗಿದ್ದು, ಅದರೊಳಗೆ ಸತ್ಯದ ಆಟ, ಮೂಜಿ ಮುರ್ತೆ, ಅರಸು ಆಟ, ಜೋಡಿ ಆಟ, ಎದುರು ಪೆರ್ಗ, ಎಂಚಿಲ್-ಬಚ್ಚಿಲ್, ಮಾಮಿ-ಮರ್ಮಲ್, ಪನ್ನಿ ಗೇಮ್, ಕಂಚಿಮಣಿ, ಕೈಮಣಿ ಕಟ್ಟೆ, ಕಾಯಿಯಿಂದ ಪೆತ್ತ ಕಂಜಿ ಆಟ, ಕುದುರೆ ಕಟ್ಟುವ ಆಟ ಸೇರಿದಂತೆ ಹಲವು ಬಗೆಯ ಕೌಶಲ್ಯಾಧರಿತ ಹಾಗೂ ಮನರಂಜನಾ ಆಟಗಳು ಸೇರಿದ್ದವು. ಇವು ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವುದರ ಜೊತೆಗೆ ಮಕ್ಕಳಲ್ಲಿ ಚಿಂತನಾ ಶಕ್ತಿ, ಲೆಕ್ಕಾಚಾರದ ಸಾಮರ್ಥ್ಯ ಹಾಗೂ ಏಕಾಗ್ರತೆಯನ್ನು ಬೆಳೆಸುತ್ತಿತ್ತು.
ನೈಸರ್ಗಿಕ ವಸ್ತು: ಈ ಆಟಗಳಲ್ಲಿ ಮುಖ್ಯವಾಗಿ ಮಂಜೊಟ್ಟಿ ಬೀಜ, ಗುಲಗಂಜಿ, ಹುಣಸೆಹಣ್ಣಿನ ಬೀಜ, ಪೊಂಗಾರು ಬೀಜ ಹಾಗೂ ಬಣ್ಣದ ಮಣಿಗಳನ್ನು ಬಳಸಲಾಗುತ್ತಿತ್ತು. ಮಂಜೊಟ್ಟಿ ಬೀಜ ವಿಷಕಾರಿ ಗುಣ ಹೊಂದಿರುವುದರಿಂದ ಅದನ್ನು ಕೇವಲ ಆಟಕ್ಕಾಗಿ ಮಾತ್ರ ಬಳಸುತ್ತಿದ್ದರು. ಗುಲಗಂಜಿ ಬೀಜವು ವಿಶೇಷ ಬಳ್ಳಿಯಲ್ಲಿ ಬೆಳೆಯುವ ಬೀಜವಾಗಿದ್ದು, ಪ್ರತಿಯೊಂದು ಬೀಜವೂ ಒಂದೇ ತೂಕ ಹೊಂದಿರುವುದು ಇದರ ವಿಶೇಷತೆ. ಇದೇ ಕಾರಣಕ್ಕೆ ಹಿಂದೆ ಚಿನ್ನಾಭರಣ ಅಂಗಡಿಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ತೂಕ ಅಳೆಯಲು ಗುಲಗಂಜಿ ಬೀಜವನ್ನು ಮಾನದಂಡವಾಗಿ ಬಳಸಲಾಗುತ್ತಿತ್ತು.ಮಕ್ಕಳಲ್ಲಿ ಗಣಿತ ಕೌಶಲ್ಯ: ಜನಪದ ತಜ್ಞರ ಪ್ರಕಾರ ಇಂತಹ ಸಾಂಪ್ರದಾಯಿಕ ಆಟಗಳು ಮಕ್ಕಳಲ್ಲಿ ಗಣಿತ ಕೌಶಲ್ಯ, ತಾಳ್ಮೆ, ಏಕಾಗ್ರತೆ, ತಾರ್ಕಿಕ ಚಿಂತನೆ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದವು. ಇವು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಜೀವನ ಮೌಲ್ಯಗಳು, ಸಹಬಾಳ್ವೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಾಧ್ಯಮಗಳಾಗಿದ್ದವು.ಇಂದು ಈ ಆಟಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಗ್ರಾಮೀಣ ಸಮುದಾಯಗಳು ಆಟಿ ತಿಂಗಳ ಸಂದರ್ಭದಲ್ಲಿ ಸಾಂಪ್ರದಾಯಿಕ ಆಟಗಳ ಸ್ಪರ್ಧೆ, ಪ್ರದರ್ಶನ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಈ ಅಮೂಲ್ಯ ಪರಂಪರೆಗೆ ಮತ್ತೆ ಜೀವ ತುಂಬುವ ಅಗತ್ಯವಿದೆ ಎಂದು ಜನಪದ ಆಸಕ್ತರು ಅಭಿಪ್ರಾಯಪಡುತ್ತಾರೆ.