ಪ್ರಸ್ತುತ ದಿನಮಾನದಲ್ಲಿ ಜಾನಪದ ಮೂಲ ಪದಗಳಾದ ಅವ್ವ-ಅಪ್ಪ, ಅಜ್ಜಿ-ತಾತ, ಮಾವ-ಸೋದರಮಾವ ಪದಗಳು ಕಣ್ಮರೆಯಾಗಿ ಮಮ್ಮಿ ಡ್ಯಾಡಿ ಎಂಬ ಪದಗಳು ಆಕ್ರಮಿಸಿಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡವನ್ನು ಹೆಚ್ಚಿನ ಜನರು ಬಳಸಿ ಬೆಳೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕನ್ನಡ ಭಾಷೆ ಸಾಹಿತ್ಯ ಬೆಳೆಯಬೇಕಾದರೆ ಇತರೆ ಭಾಷೆಗಳನ್ನು ಕಲಿತು, ಅದರಲ್ಲಿನ ಸಾಹಿತ್ಯವನ್ನು ನಮ್ಮ ಮಾತೃ ಭಾಷೆಗೆ ಭಾಷಾಂತರ ಮಾಡುವ ಮೂಲಕ ಕನ್ನಡವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು ಎಂದು ಜಾನಪದ ವಿದ್ವಾಂಸ ಹಾಗೂ ಇಪ್ರೋ ಜಾನಪದ ಮಹಾ ವಿದ್ಯಾಲಯದ ಶೈಕ್ಷಣಿಕ ನಿರ್ದೇಶಕ ವ.ನಂ.ಶಿವರಾಮು ಅಭಿಪ್ರಾಯಪಟ್ಟರು.ತಾಲೂಕಿನ ಚಿಣ್ಯ ಗ್ರಾಮದ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಕನ್ನಡ ಭಾಷೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ವಿಶ್ವಖ್ಯಾತಿ ಪಡೆದಿದೆ ಎಂದರು.
ಪ್ರಸ್ತುತ ದಿನಮಾನದಲ್ಲಿ ಜಾನಪದ ಮೂಲ ಪದಗಳಾದ ಅವ್ವ-ಅಪ್ಪ, ಅಜ್ಜಿ-ತಾತ, ಮಾವ-ಸೋದರಮಾವ ಪದಗಳು ಕಣ್ಮರೆಯಾಗಿ ಮಮ್ಮಿ ಡ್ಯಾಡಿ ಎಂಬ ಪದಗಳು ಆಕ್ರಮಿಸಿಕೊಂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡವನ್ನು ಹೆಚ್ಚಿನ ಜನರು ಬಳಸಿ ಬೆಳೆಸುತ್ತಿದ್ದಾರೆ. ಆದರೆ, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹೊರ ರಾಜ್ಯ, ಹೊರ ದೇಶದ ಜನರು ವಲಸೆ ಬಂದು ನೆಲೆಸಿರುವುದರಿಂದ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ವಲಸಿಗರಿಗೆ ಈ ನೆಲದ ಭಾಷೆ ಕಲಿಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕಿದೆ ಎಂದರು.ಜಾನಪದದ ಮೂಲ ಬೇರು ಇರುವುದು ಹಳ್ಳಿಗಳಲ್ಲಿ. ಸರಳ, ಸುಲಲಿತ, ಸುಂದರವಾಗಿರುವ ಕನ್ನಡ ಭಾಷೆಯನ್ನು ಹೆಚ್ಚು ಬಳಸಬೇಕು. ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಸೀಮಿತವಾಗದೆ ಕನ್ನಡ ನಿತ್ಯೋತ್ಸವವಾಗಬೇಕು. ರಾಜ್ಯದ ವಿವಿಧ ಭಾಗಗಳಲ್ಲಿ ಭಿನ್ನ ರೀತಿಯಲ್ಲಿ ಭಾಷೆ ಬಳಕೆಯಿದೆ. ಇದು ಕನ್ನಡದಲ್ಲೇ ಮಾತ್ರ ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್ ಮಾತನಾಡಿ, ಕಲೆ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ವಾಸ್ತು ಶಿಲ್ಪಕ್ಕೆ ಖ್ಯಾತಿಯಾಗಿರುವ ಕರ್ನಾಟಕದ ಇತಿಹಾಸದಲ್ಲಿ ನಾಡು ನುಡಿಗಾಗಿ ಸೇವೆ ಸಲ್ಲಿಸಿರುವ ಸಾಹಿತಿಗಳು, ಕವಿಗಳು ಮತ್ತು ಜಾನಪದರ ತತ್ವ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್ ಮಾತನಾಡಿದರು. ಶಾಲೆ ಕನ್ನಡ ಭಾಷಾ ಶಿಕ್ಷಕ ಖರಡ್ಯ ಬಸವೇಗೌಡ ಪ್ರಸ್ತಾವಿಕ ನುಡಿಗಳಾಡಿದರು. ಸಮಾರಂಭದ ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಉಮಾ ಶುಭಮೂರ್ತಿ, ತೇಜಸ್ವಿನಿ, ಫೈರೋಜ್ಪಾಷ, ಬಸವರಾಜು, ಶೃತಿ, ಶ್ರೀಧರ್, ಪವಿತ್ರ, ರುದ್ರೇಶ್ ಸೇರಿದಂತೆ ಹಲವರು ಇದ್ದರು.