ಮಹದೇಶ್ವರನ ಬೆಟ್ಟದಲ್ಲಿ ಸಂಚಾರ ಅಸ್ತವ್ಯಸ್ತ

| Published : Aug 05 2024, 12:33 AM IST

ಸಾರಾಂಶ

ಕರ್ನಾಟಕ ರಾಜ್ಯ ಸಾರಿಗೆ ಬಸ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಭಾನುವಾರ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಕನ್ನಡಪ್ರಭ ವಾರ್ತೆ ಹನೂರು

ಕರ್ನಾಟಕ ರಾಜ್ಯ ಸಾರಿಗೆ ಬಸ್‌ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಭಾನುವಾರ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್‌ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ನಡೆದ ಸ್ಥಳದಿಂದ ಸುಮಾರು 10 ಕಿಲೋ ಮೀಟರ್‌ವರಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಸುಮಾರು 3 ಗಂಟೆಗಳ ಕಾಲ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಲೆ ಮಾದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 10 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿ ಪರದಾಡುತ್ತಿದ್ದ ವೇಳೆ ಮಲೆ ಮಾದೇಶ್ವರ ಬೆಟ್ಟಕ್ಕೆ ಬಂದು ವಾಪಸ್ ಕೊಳ್ಳೇಗಾಲಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುತ್ತಿದ್ದನ್ನು ಮನಗಂಡ ಡಿವೈಎಸ್ಪಿ ಧರ್ಮೇಂದರ್ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಡಕೋಟಾ ಬಸ್ ತಳ್ಳಿದ ಭಕ್ತರು:

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕರ್ನಾಟಕ ರಾಜ್ಯ ಸಾರಿಗೆ ಬಸ್‌ ಮುಂದೆ ಹೋಗಲು ಆಗದೆ ಪ್ರಯಾಣಿಕರನ್ನೆಲ್ಲ ಇಳಿಸಿ ನಂತರ ಭಕ್ತಾದಿಗಳೇ ಡಕೋಟಾ ಬಸ್ಸನ್ನು ತಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆನೆ ತಲೆ ದಿಂಬ ಕೆಳಭಾಗದ ಮುಖ್ಯ ರಸ್ತೆ ಬಿದಿರು ಮರ ರಸ್ತೆಗೆ ಅಡ್ಡಲಾಗಿ ಬಿದ್ದು ಟ್ರಾಫಿಕ್ ಜಾಮ್:

ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅರಣ್ಯ ಪ್ರದೇಶದ ಮಧ್ಯಭಾಗದ ಮುಖ್ಯ ರಸ್ತೆಯಲ್ಲಿ ಬೃಹತ್ ಬಿದಿರು ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಇದರಿಂದಾಗಿ ಭೀಮನ ಅಮಾವಾಸ್ಯೆ ಪೂಜೆಗೆ ಬಂದಿದ್ದ ಭಕ್ತಾದಿಗಳು ಬೆಳಿಗ್ಗೆ ಮತ್ತೆ ಸಂಜೆ ಅರಣ್ಯ ಪ್ರದೇಶದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು.