ಹಾನಗಲ್ಲ ತಾಲೂಕಿನ ಮಂತಗಿ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ

| Published : Jul 02 2025, 12:21 AM IST

ಸಾರಾಂಶ

ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣಕ್ಕಾಗಿ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಬದಿಯಲ್ಲಿ ಅಗೆದಿದ್ದ ಮಣ್ಣು ರಾಡಿಯಾಗಿ ಅವಾಂತರ ಸೃಷ್ಟಿಸುತ್ತಿದೆ. ಅಲ್ಲಲ್ಲಿ ದೊಡ್ಡ ಗಾತ್ರದ ಗುಂಡಿಗಳು ರಸ್ತೆ ಬದಿಯಲ್ಲಿವೆ.

ಹಾನಗಲ್ಲ: ಮಲೆನಾಡು ಭಾಗದ ಗ್ರಾಮಗಳು ತಾಲೂಕು ಕೇಂದ್ರ ಹಾನಗಲ್ಲನ್ನು ಸಂಪರ್ಕಿಸುವ ಮಂತಗಿ ರಸ್ತೆಯಲ್ಲಿ ಸಂಚಾರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಕಿರಿದಾದ ಈ ರಸ್ತೆಯ ಒಂದು ಬದಿಯಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ನಿತ್ಯ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಬಸ್, ಕಾರು, ಟ್ರ್ಯಾಕ್ಟರ್ ಮತ್ತು ಬೈಕ್‌ಗಳು ಈ ರಸ್ತೆಯಲ್ಲಿ ಉರುಳಿ ಬಿದ್ದಿವೆ. ಕೆಲವರು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ.ಈಗ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣಕ್ಕಾಗಿ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಬದಿಯಲ್ಲಿ ಅಗೆದಿದ್ದ ಮಣ್ಣು ರಾಡಿಯಾಗಿ ಅವಾಂತರ ಸೃಷ್ಟಿಸುತ್ತಿದೆ. ಅಲ್ಲಲ್ಲಿ ದೊಡ್ಡ ಗಾತ್ರದ ಗುಂಡಿಗಳು ರಸ್ತೆ ಬದಿಯಲ್ಲಿವೆ. ಎದುರಿಗೆ ವಾಹನ ಬಂದರೆ, ಅವಘಡ ಗ್ಯಾರಂಟಿ. ರಸ್ತೆಯ ಅಂಚಿನಲ್ಲಿ ಸಾಗುವ ವಾಹನ ಪಲ್ಟಿಯಾಗುತ್ತಿವೆ. ಇಷ್ಟಲ್ಲದೆ, ಈ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೂ ರಸ್ತೆಯ ಅವಾಂತರ ಹಿನ್ನಡೆ ತರುತ್ತಿದೆ.

ಈಗ ಅಡಕೆ ಸಸಿ ಮಾರಾಟದ ಸೀಜನ್. ಲಕ್ಷಗಟ್ಟಲೇ ಸಸಿಗಳನ್ನು ಬೆಳೆಸಿ ಮಾರಾಟಕ್ಕೆ ಸಿದ್ಧಗೊಳಿಸಲಾಗಿದೆ. ಆದರೆ ವಾಹನಗಳ ಸಂಚಾರ ದುಸ್ತರವಾದ ಪರಿಣಾಮ ಇತ್ತ ಕೃಷಿಕರು ಬರುತ್ತಿಲ್ಲ. ಮಂಗಳವಾರ ಬೆಳಗ್ಗೆ ಅಡಕೆ ಸಸಿ ಹೊತ್ತ ಟ್ರ್ಯಾಕ್ಟರ್ ಮಣ್ಣಿನಲ್ಲಿ ಸಿಲುಕಿ ಫಜೀತಿಯಾಗಿದೆ ಎಂದು ಇಲ್ಲಿನ ರೈತ ಮುತ್ತಣ್ಣ ಪೂಜಾರ ಹೇಳಿದ್ದಾರೆ.

ಧರ್ಮಾ ಉಪ ಕಾಲುವೆಯಿಂದ ಹರಿಯುತ್ತಿದ್ದ ನೀರು ಈ ಕಾಮಗಾರಿಯಿಂದ ಬೇರೆಡೆ ಸಾಗುತ್ತಿದೆ. ಈಗಾಗಲೇ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡಿದ್ದು, ಗುಂಡಿಗಳನ್ನು ಮುಚ್ಚಿ ಕೃಷಿ ಜಮೀನುಗಳಿಗೆ ಜಾನುವಾರು, ವಾಹನಗಳು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ರೈತರಾದ ನಂದರಾಮ ಗುರ್ಲಹೊಸೂರ, ಶಿವಪ್ಪ ಕೌಲಾಪುರಿ ಆಗ್ರಹಿಸಿದ್ದಾರೆ.

ಪೈಪ್‌ಲೈನ್ ಅಳವಡಿಕೆ: ಅಮೃತ ಯೋಜನೆ ಅಡಿಯಲ್ಲಿ ಮಳಗಿ ಧರ್ಮಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೇವಾಗಿ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಅಂಗವಾಗಿ ಪೈಪ್‌ಲೈನ್ ಅಳವಡಿಕೆ ನಡೆಯುತ್ತಿದೆ. ₹38 ಕೋಟಿ ವೆಚ್ಚದ ಈ ಕಾಮಗಾರಿ ಆನಿಕೆರೆ ಸಮೀಪದಿಂದ ಮಂತಗಿ ತನಕ ನಡೆದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ ತಿಳಿಸಿದ್ದಾರೆ.ಮಳೆ ಬಿಡುವು ನೀಡಿದ ಬಳಿಕ ರಸ್ತೆಯ ಅಂಚಿನ ತಗ್ಗು, ಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಅನುವು ಮಾಡಲಾಗುತ್ತದೆ ಎಂದಿದ್ದಾರೆ.