ಸಾರಾಂಶ
ನೀರು ನಾಯಿಗಳಿಗೆ ಇಲ್ಲ ರಕ್ಷಣೆ, ದೇಶ-ವಿದೇಶಿ ಪ್ರವಾಸಿಗರಿಂದ ಅಧಿಕ ಹಣ ವಸೂಲಿ
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿತಾಲೂಕಿನ ಸಾಣಾಪುರದ ಪ್ರವಾಸಿ ಮಂದಿರ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕುತ್ತಿದ್ದು, ದೇಶ-ವಿದೇಶದಿಂದ ಬರುತ್ತಿರುವ ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತಿರುವ ಆರೋಪ ಕೇಳಿ ಬರುತ್ತಿದೆ.
ಪ್ರವಾಸಿಗರ ತಾಣ ಎನಿಸಿಕೊಂಡಿರುವ ಸಾಣಾಪುರ ಪ್ರದೇಶವು ಅರಣ್ಯ ಇಲಾಖೆ ಸರ್ವೆ ನಂ.13 ರ ವ್ಯಾಪ್ತಿಗೆ ಬರುತ್ತದೆ. ನೀರಾವರಿ ಇಲಾಖೆಗೆ ಈ ಪ್ರದೇಶವು ಬರುತ್ತದೆ. ಈಗ ಸಾಣಾಪುರ ಗ್ರಾಮದ ಸುತ್ತಲು ನದಿ ಸೇರಿದಂತೆ ಗುಡ್ಡ ಬೆಟ್ಟಗಳ ಮಧ್ಯೆ ರೆಸಾರ್ಟ್‌ಗಳು ಇರುವುದರಿಂದ ದೇಶ-ವಿದೇಶಿ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಅಕ್ರಮ ತೆಪ್ಪಗಳ ಸಂಚಾರ:ಸಾಣಾಪುರ ಪ್ರವಾಸಿ ಮಂದಿರದ ಬಳಿ ಇರುವ ತುಂಗಭದ್ರಾ ನದಿಯಲ್ಲಿ 17ಕ್ಕೂ ಹೆಚ್ಚು ತೆಪ್ಪಗಳನ್ನು ಹಾಕುತ್ತಿದ್ದಾರೆ. ನದಿಯ ಸುತ್ತಲು ಪ್ರವಾಸಿಗರನ್ನು ಸುತ್ತಾಡಿಕೊಂಡು ಬರಲು ತೆಪ್ಪಗಳ ಮಾಲೀಕರು ₹2 ಸಾವಿರ ವಸೂಲಿ ಮಾಡುತ್ತಿದ್ದಾರೆಂಬ ದೂರು ಕೇಳಿ ಬರುತ್ತಿದೆ. ಕಳೆದ ಒಂದು ವಾರದ ಹಿಂದೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತೆಪ್ಪಗಳ ಮಾಲೀಕರ ಸಭೆ ನಡೆದು ಯಾವುದೇ ಕಾರಣಕ್ಕೆ ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡ ಬಾರದೆಂದು ಎಚ್ಚರಿಕೆ ನೀಡಿದ್ದರು ಸಹ ಇಲಾಖೆಯ ಸೂಚನೆ ಗಾಳಿಗೆ ತೂರಿ ಅವ್ಯಾಹತವಾಗಿ ಹಣ ವಸೂಲಿಗೆ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ವಿವಾಹ ಪೂರ್ವದ ಶೂಟಿಂಗ್‌ಗಾಗಿ ಬರುವವವರು ಸಂಖ್ಯೆ ಇಲ್ಲಿ ಹೆಚ್ಚಿದ್ದು, ಇವರಿಂದ ₹5 ರಿಂದ 10 ಸಾವಿರ ವಸೂಲಿ ಮಾಡುತ್ತಿದ್ದಾರೆನ್ನಲಾಗಿದೆ.ನೀರು ನಾಯಿಗಳಿಗೆ ಇಲ್ಲ ರಕ್ಷಣೆ:ಸಾಣಾಪುರದ ಪ್ರವಾಸಿ ಮಂದಿರದ ಬಳಿ ಇರುವ ತುಂಗಭದ್ರಾ ನದಿ, ಸಮತೋಲನ ಜಲಾಶಯ, ಋಷಿಮುಖ ಪರ್ವತ, ಸೇರಿದಂತೆ ವಿವಿಧ ನದಿ ಪ್ರದೇಶದಲ್ಲಿ ಹೆಚ್ಚಾಗಿ ನೀರು ನಾಯಿಗಳು ಕಾಣುತ್ತವೆ. ಆದರೆ ತೆಪ್ಪಗಳ ಸಂಚಾರದಿಂದ ನಾಯಿಗಳು ಕಾಣದಂತಾಗಿವೆ. ತೆಪ್ಪಗಳಲ್ಲಿ ತೆರಳುವವರು ನಾಯಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ.
ಈ ಪ್ರದೇಶದ ನದಿಯಲ್ಲಿ ಮೊಸಳೆಗಳು ಅಧಿಕ ಸಂಖ್ಯೆಯಲ್ಲಿದೆ. ಬೆಟ್ಟಗಳಲ್ಲಿ ಚಿರತೆಗಳು ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ನೀರು ನಾಯಿ, ಮೊಸಳೆ, ಚಿರತೆಗಳ ಬಗ್ಗೆ ಅರಣ್ಯ ಇಲಾಖೆ ಎಚ್ಚರಿಕೆ ನಾಮಫಲಕ ಹಾಕಿದ್ದರೂ ತೆಪ್ಪಗಳ ಮಾಲೀಕರು ಕ್ಯಾರೇ ಎನ್ನದೆ ನಿರಂತರವಾಗಿ ತೆಪ್ಪ ಹಾಕುತ್ತಿದ್ದಾರೆ.ಈ ಹಿಂದೆ ನದಿಗಳಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಹಾಕಬಾರದೆಂದು ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿತ್ತು. ಆದರೆ ತೆಪ್ಪಗಳ ಮಾಲೀಕರು ಜಿಲ್ಲಾಧಿಕಾರಿ ಆದೇಶವನ್ನು ಪಾಲಿಸದೆ ಅಕ್ರಮವಾಗಿ ತೆಪ್ಪ ಹಾಕುತ್ತಿದ್ದಾರೆ. ಕಳೆದ ವಾರದ ಹಿಂದೆ ಅರಣ್ಯ ಇಲಾಖೆಯವರು ತೆಪ್ಪಗಳನ್ನು ಜಪ್ತಿ ಮಾಡಿದ್ದರು. ಆದರೆ ಈಗ ನಿರಂತರವಾಗಿ ತೆಪ್ಪಗಳ ಸಂಚಾರ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ನೀರು ನಾಯಿಗಳ ರಕ್ಷಣೆ ಮತ್ತು ಪ್ರವಾಸಿಗರಿಗೆ ಸುಗಮವಾಗಿ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕು ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.