ಗಜೇಂದ್ರಗಡ ಜೋಡುರಸ್ತೆಯಲ್ಲಿ ಸಂಚಾರ ದುಸ್ತರ

| Published : Jun 19 2024, 01:02 AM IST

ಸಾರಾಂಶ

ಗಜೇಂದ್ರಗಡ ಪಟ್ಟಣದ ಜೋಡು ರಸ್ತೆಯಲ್ಲಿ ಮಂಗಳವಾರ ವಾರದ ಸಂತೆಯ ದಿನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಕೆಲವು ವ್ಯಾಪಾರಸ್ಥರು ರಸ್ತೆ ಮಧ್ಯೆ ಅಂಗಡಿ ಇಡುತ್ತಾರೆ. ವಾಹನ ಸವಾರರು ಅದ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿದ್ದಾರೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಪಟ್ಟಣದ ಜೋಡು ರಸ್ತೆಯಲ್ಲಿ ಮಂಗಳವಾರ ವಾರದ ಸಂತೆಯ ದಿನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.

ಮೊದಲು ಇಲ್ಲಿ ಒಂದು ರಸ್ತೆ ಸಂತೆಗಾಗಿ ಮೀಸಲಿಟ್ಟರೆ ಇನ್ನೊಂದು ರಸ್ತೆಯಲ್ಲಿ ವಾಹನ ಸಂಚಾರ ನಡೆಯುತ್ತಿತ್ತು. ಆದರೆ ಈಗ ವ್ಯಾಪಾರಿಗಳು ಎಲ್ಲೆಂದರಲ್ಲಿ ಅಂಗಡಿ ಇಡುತ್ತಾರೆ, ಗ್ರಾಹಕರು ತಮಗೆ ಬೇಕಾದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಜನದಟ್ಟಣೆ ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಂಚಾರ ಕಷ್ಟಕರವಾಗುತ್ತಿದೆ. ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.

ಪಟ್ಟಣಕ್ಕೆ ವ್ಯಾಪಾರ-ವಹಿವಾಟಿಗೆ ನಿತ್ಯ ಸುತ್ತಮುತ್ತಲ ಹಳ್ಳಿಗಳ ಜನರು ಬರುತ್ತಾರೆ. ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದೇ ವೇಳೆ ಕೆಲವು ಬೀದಿ ಬದಿ ವ್ಯಾಪಾರಸ್ಥರು ತಮಗೂ ಸಂಚಾರ ನಿಯಮಗಳಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡುರಸ್ತೆಯಲ್ಲಿ ಅಂಗಡಿ ಇಟ್ಟು ವ್ಯಾಪಾರ ನಡೆಸಲು ಆರಂಭಿಸುತ್ತಾರೆ.

ಪಟ್ಟಣದ ಪ್ರಮುಖ ರಸ್ತೆಗಳಾದ ರೋಣ, ಕುಷ್ಟಗಿ ರಸ್ತೆ ಹಾಗೂ ಬಸ್ ನಿಲ್ದಾಣಕ್ಕೆ ಕಾಲಕಾಲೇಶ್ವರ ವೃತ್ತ ಕೊಂಡಿಯಾಗಿದೆ. ಆದರೆ ನಾಲ್ಕು ಪ್ರಮುಖ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಾಗಿರುತ್ತದೆ.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಳವಡಿಸಿದ ಟ್ರಾಫಿಕ್‌ ಸಿಗ್ನಲ್‌ ನಿಷ್ಕ್ರಿಯವಾಗಿದೆ. ಹೀಗಾಗಿ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ. ಇತ್ತೀಚೆಗೆ ಶಾಸಕ ಜಿ.ಎಸ್. ಪಾಟೀಲ ಅವರು ಈ ವೃತ್ತದಲ್ಲಿ ಥರ್ಡ್ ಐ ಸಿಸಿ ಕ್ಯಾಮೆರಾ ಉದ್ಘಾಟಿಸಿದ್ದರು. ಆರಂಭದ ದಿನಗಳಲ್ಲಿ ವಾಹನ ಸವಾರರು ಹೆಲ್ಮೆಟ್ ಧರಿಸಿ ಓಡಾಡಿದರು. ಆದರೆ ಈಗ ನಿಷ್ಕಾಳಜಿ ಮಾಡುತ್ತಿದ್ದಾರೆ. ಹೆಲ್ಮೆಟ್ ಏಕೆ ಎಂಬ ಮನಸ್ಥಿತಿಗೆ ಬಂದಿದೆ. ಥ್ರೀಬಲ್ ರೈಡಿಂಗ್ ಸಹ ಸಾಮಾನ್ಯವಾಗಿದೆ.

ಟ್ರಾಫಿಕ್ ಸಿಗ್ನಲ್, ಥರ್ಡ್ ಐ ಸಿಸಿ ಕ್ಯಾಮೆರಾ ಜತೆಗೆ ಸಾಮಾನ್ಯ ಸಿಸಿ ಕ್ಯಾಮೆರಾಗಳು ಪಟ್ಟಣದಲ್ಲಿ ಸಮರ್ಪಕ ಕಾರ್ಯನಿರ್ವಹಿಸುವಂತೆ ಮಾಡಬೇಕು. ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಮತವಾಗಿದೆ.ಸುಸಜ್ಜಿತ ಮಾರುಕಟ್ಟೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಯಿಲ್ಲ. ಹೀಗಾಗಿ ರಸ್ತೆ ಅಕ್ಕಪಕ್ಕ ಮಾರಾಟ ಮಾಡುವುದು ಅನಿವಾರ್ಯ. ಹೀಗಾಗಿ ಸಂಚಾರ ಸುಗಮಗೊಳಿಸುವ ವ್ಯವಸ್ಥೆಯ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಮಂಗಳವಾರ ಸಂತೆ ದಿನ ಎದುರಾಗುವ ಸಮಸ್ಯೆ ಮುಂದಿನ ದಿನಗಳಲ್ಲಿ ನಿತ್ಯ ಉಂಟಾಗಬಹುದು. ಸ್ಥಳೀಯ ಆಡಳಿತ ಈ ಸಮಸ್ಯೆಗೆ ಪರಿಹಾರ ಒದಗಿಸಲು ಯೋಜನೆ ರೂಪಿಸಬೇಕು, ಸಂಚಾರ ವ್ಯವಸ್ಥೆ ಉತ್ತಮಪಡಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.ಪಟ್ಟಣದಲ್ಲಿ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಬರುವ ದಿನ ಎಲ್ಲವೂ ಸರಿಯಾಗಿರುತ್ತದೆ. ಆದರೆ ಅವರು ಬಂದು ಹೋದ ಮರುಕ್ಷಣವೇ ಎಲ್ಲವೂ ಅಯೋಮಯ ಎಂಬಂತಾಗಿರುತ್ತಿದೆ. ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಆಡಳಿತ ಆದ್ಯತೆ ನೀಡಬೇಕು ಎಂದು ಸ್ಥಳೀಯ ವರ್ತಕರಾದ ನಾಗರಾಜ ಸವದಿ, ಪ್ರಾಣೇಶ ಕೊಡಗಾನೂರ, ಸಿದ್ದು ಬಳಿಗೇರ ಹೇಳುತ್ತಾರೆ.ಪಟ್ಟಣದ ಜೋಡು ರಸ್ತೆಯ ಒಂದು ಬದಿಯಲ್ಲಿ ಮಂಗಳವಾರ ಸಂತೆ ವ್ಯಾಪಾರ ಮಾಡಲು ಹಾಗೂ ಉಳಿದ ದಿನ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ಗಜೇಂದ್ರಗಡ ಪುರಸಭೆ ಸದಸ್ಯರು ಹಾಗೂ ಮುಖ್ಯಾಧಿಕಾರಿ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗಜೇಂದ್ರಗಡ ಪುರಸಭೆ ಡೆ-ನೆಲ್ಮ್ ಯೋಜನಾಧಿಕಾರಿ ಬಿ. ಮಲ್ಲಿಕಾರ್ಜುನಗೌಡ ಹೇಳುತ್ತಾರೆ.