ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ; ವಾಹನ ಸವಾರರು ಹೈರಾಣ

| Published : Aug 01 2025, 02:15 AM IST

ಸಾರಾಂಶ

ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಸಂಚಾರ ದುಸ್ತರವಾಗಿದೆ.

ಸುಬ್ರಮಣಿ ಸಿದ್ದಾಪುರ

ಕನ್ನಡ ಪ್ರಭ ವಾರ್ತೆ ಸಿದ್ದಾಪುರ

ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಸಂಚಾರ ದುಸ್ತರವಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.ಸಿದ್ದಾಪುರದಿಂದ ನೆಲ್ಯಹುದಿಕೇರಿವರೆಗಿನ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಾಗಿದೆ. ಸಿದ್ದಾಪುರದಿಂದ ನೆಲ್ಯಹುದಿಕೇರಿವರೆಗಿನ ಒಂದೂವರೆ ಕಿ ಮಿ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ದೊಡ್ಡ ಹೊಂಡಗಳೇ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಬೃಹತ್ ಹೊಂಡಗಳಲ್ಲಿ ನೀರು ನಿಂತು ವಾಹನಗಳು ಈ ಹೊಂಡಗಳಲ್ಲಿ ಬಿದ್ದು ಹಾಳಾಗುತ್ತಿದ್ದು ವಾಹನ ಸವಾರರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಾ ವಾಹನ ಚಲಾಯಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಬೈಕ್ ಸೇರಿದಂತೆ ಸಣ್ಣ ವಾಹನಗಳಂತು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದು ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ತಾತ್ಕಾಲಿಕವಾಗಿ ಗುಂಡಿಗಳಿಗೆ ಜಲ್ಲಿಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚಿ ವಾಹನ ಚಲಾಯಿಸಲು ಅನುಕೂಲ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಸಿದ್ದಾಪುರದಿಂದ ವಿರಾಜಪೇಟೆ ರಸ್ತೆಯಲ್ಲಿ 2 ಕಿ ಮೀ. ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು ಮಳೆಯಾದ್ದರಿಂದ ಕಾಮಗಾರಿ ಸ್ಥಗಿತಗೊಂಡು ರಸ್ತೆಯಲ್ಲಿ ಗುಂಡಿಗಳಾಗಿದ್ದು ಜನರು ಸರ್ಕಸ್ ಮಾಡುತ್ತಾ ವಾಹನ ಚಲಾಯಿಸಬೇಕಾಗಿದೆ.ಪಾಲಿಬೆಟ್ಟ ಕಡೆಗೆ ತೆರಳುವ ರಸ್ತೆಗಳು ಹಾಳಾಗಿದೆ. ಗುಹ್ಯ ಗೂಡುಗದ್ದೆ ಕಡೆಗಳಿಗೆ ತೆರಳುವ ರಸ್ತೆಗಳ ಪಾಡಂತು ಹೇಳ ತೀರದಾಗಿದೆ‌.ನೆಲ್ಯಹುದಿಕೇರಿಯಿಂದ ಬೆಟ್ಟದಕಾಡುವಿಗೆ ತೆರಳುವ ರಸ್ತೆಯು ಗುಂಡಿಯಾಗಿದೆ. ಆಟೋ ಚಾಲಕರಿಗಂತು ಗುಂಡಿಯಾದ ರಸ್ತೆಯಲ್ಲಿ ಆಟೋ ಚಲಾಯಿಸಿ ಸಿಗುವ ವರಮಾನವೆಲ್ಲ ಆಟೋ ರಿಪೇರಿ ಮಾಡಲು ಸಾಕಾಗುತ್ತಿಲ್ಲ ಎಂದು ದೂರುತ್ತಿದ್ದಾರೆ.ರಸ್ತೆ ದುರಸ್ತಿ ಮಾಡಲು ಮಳೆಯ ಕಾರಣ ಹೇಳಿ ಸ್ಥಳೀಯ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿಗಳು ಜಾರಿ ಕೊಳ್ಳುತ್ತಿದ್ದು ಮಳೆಯ ನಂತರ ರಸ್ತೆಗಳನ್ನು ಸರಿ ಪಡಿಸುವರೆ ಎಂಬುದನ್ನು ಕಾದು ನೋಡಬೇಕಿದೆ.-------------------------------------------ಈ ಭಾಗದ ಸಂಪೂರ್ಣ ರಸ್ತೆಗಳು ಹಾಳಾಗಿದ್ದು ಆಟೋ ಓಡಿಸಲು ತುಂಬಾ ಕಷ್ಟವಾಗಿದೆ. ಗುಂಡಿಯಲ್ಲಿ ಆಟೋ ಓಡಿಸುವುದರಿಂದ ಆಟೋ ಬೇಗ ರಿಪೇರಿಗೆ ಬರುತ್ತಿದ್ದು ದುಡಿದ ದುಡ್ಡೆಲ್ಲಾ ವಕ್೯ ಶಾಪಿಗೆ ಕೊಡಬೇಕಾಗಿದೆ. ಹೀಗಾದರೆ ನಾವು ಹೇಗೆ ಕುಟುಂಬ ಸಾಕುವುದು ಆದಷ್ಟು ಬೇಗ ಸರ್ಕಾರ ರಸ್ತೆಗಳನ್ನು ಸರಿಪಡಿಸಲಿ.ರಹೂಪ್ ಕಟ್ಟೆಕಾಡ್. ಆಟೋ ಚಾಲಕ. ಸಿದ್ದಾಪುರ.