ಸೇತುವೆ ಮೇಲೆ ಸಂಚಾರ ಸ್ಥಗಿತ, ಮೀನುಗಾರರ ಮನೆಗಳು ಮುಳುಗುವ ಭೀತಿ

| Published : Jul 28 2025, 12:34 AM IST

ಸೇತುವೆ ಮೇಲೆ ಸಂಚಾರ ಸ್ಥಗಿತ, ಮೀನುಗಾರರ ಮನೆಗಳು ಮುಳುಗುವ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದರಿಂದ ನದಿಗೆ ಭಾನುವಾರ 1 ಲಕ್ಷ ಕ್ಯುಸೆಕ್‌ ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಡಲಾಗಿದೆ. ಇದರಿಂದ ಸೇತುವೆ ಮಟ್ಟಕ್ಕೆ ನೀರು ಹರಿದು ಬರುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಗಂಗಾವತಿಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಚಾರ ತಡೆಗೆ ಅದೇಶಿಸಿದ್ದರು. ಮಧ್ಯಾಹ್ನ 2 ಗಂಟೆಗೆ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ಮಾತ್ರ ಅನುವು ಕಲ್ಪಿಸಿ, ಉಳಿದ ವಾಹನಗಳ ಸಂಚಾರಕ್ಕೆ ತಡೆ ಹೇರಲಾಯಿತು. ಸಂಜೆ 5 ಗಂಟೆಯಷ್ಟರಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆ ದ್ವಿಚಕ್ರ ವಾಹನ ಸಂಚಾರಕ್ಕೆ, ಕತ್ತಲಾಗುತ್ತಿದ್ದಂತೆ ಪಾದಚಾರಿಗಳ ಸಂಚಾರಕ್ಕೂ ನಿರ್ಬಂಧ ಹೇರಿ ಸೇತುವೆ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು. ಇನ್ನು ನದಿ ಪಾತ್ರ ಜನತೆಗೆ ತಮ್ಮ ಮನೆಗಳು ಮುಳುಗುವ ಆತಂಕ ಉಂಟಾಗಿದ್ದು, ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಭತ್ತದ ಸಸಿ ಮಡಿಗಳೆಲ್ಲ ಜಲಾವೃತಗೊಂಡಿವೆ. ಇನ್ನು ಜಲಾಶಯದಿಂದ ನದಿಗೆ ನೀರು ಹರಿಬಿಡುವ ಪ್ರಮಾಣ ಹೆಚ್ಚಾದಲ್ಲಿ ಕಂಪ್ಲಿ ಕೋಟೆ ಆಂಜನೇಯ ದೇವಸ್ಥಾನ, ಬೃಂದಾವನ ಸೇರಿ ಅನೇಕ ಮಂದಿರಗಳು ಜಲಾವೃತಗೊಳ್ಳಲಿವೆ.

ಪ್ರಭಾರ ತಹಸೀಲ್ದಾರ್ ನರಸಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಮಧ್ಯಾಹ್ನ 1.10ಲಕ್ಷ ಕ್ಯೂಸೆಕ್‌ನಷ್ಟು ನೀರು ನದಿಗೆ ಬಿಟ್ಟಿದ್ದಾರೆ. ಇದರಿಂದ ಸೇತುವೆ ಮುಳುಗಡೆಗೊಳ್ಳಲಿದೆ. ಅಲ್ಲದೇ ನದಿಪಾತ್ರದಲ್ಲಿನ ಕೆಲ ಮೀನುಗಾರರ ಮನೆಗಳು ಜಲಾವೃತವಾಗುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ತಳವಾರ ಓಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ಅಗತ್ಯವಿದ್ದಲ್ಲಿ ಅಲ್ಲಿಗೆ ಸ್ಥಳಾಂತರಿಸಲಾಗುವುದು. ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು ಸೋಮವಾರ 1.40ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿದು ಬರುವ ಸಾಧ್ಯತೆಯಿದೆ ಎಂಬುವ ಮಾಹಿತಿ ತಿಳಿದುಬಂದಿದೆ. ಇದರಿಂದ ನದಿಯಲ್ಲಿ ಪ್ರವಾಹ ಪ್ರಮಾಣ ಹೆಚ್ಚಾಗಲಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸೇತುವೆ ಬಳಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸ್, ಪುರಸಭೆ, ಕಂದಾಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ನದಿ ಪಾತ್ರದ ಪ್ರದೇಶವನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಬಿ. ವಾಸುಕುಮಾರ್, ಪಿಎಸ್‌ಐ ಅವಿನಾಶ್ ಕಾಂಬ್ಳೆ, ಕಂದಾಯ ಅಧಿಕಾರಿ ವೈ.ಎಂ. ಜಗದೀಶ್ ಸೇರಿ ಅಧಿಕಾರಿಗಳಿದ್ದರು.