ಮಂಗಳೂರಲ್ಲಿ ಶಾಲಾ ಗೇಟ್‌ಗಳ ಎದುರು ಟ್ರಾಫಿಕ್‌ನದ್ದೇ ಸಮಸ್ಯೆ

| Published : Nov 25 2024, 01:00 AM IST

ಮಂಗಳೂರಲ್ಲಿ ಶಾಲಾ ಗೇಟ್‌ಗಳ ಎದುರು ಟ್ರಾಫಿಕ್‌ನದ್ದೇ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು ಈ ವಿಷಯ ಪ್ರಸ್ತಾಪಿಸಿದರು. ಈ ಕುರಿತು ಗಂಭೀರ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದಲ್ಲಿ ಶಾಲೆಗಳ ಎದುರು ಮಕ್ಕಳನ್ನು ಕರೆತರುವ ವಾಹನಗಳನ್ನು ನಿಲ್ಲಿಸುವುದರಿಂದ ಟ್ರಾಫಿಕ್‌ ಸಮಸ್ಯೆ ತಲೆದೋರುತ್ತಿದೆ. ಆದ್ದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಶಾಲೆಗಳ ಒಳಗೆ ವಾಹನಗಳಿಗೆ ಪ್ರವೇಶ ನೀಡಬೇಕು. ಇಲ್ಲವೇ ಶಾಲಾರಂಭದ ವೇಳಾಪಟ್ಟಿ ಬದಲಾಯಿಸಬೇಕು ಎಂಬ ಆಗ್ರಹ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾಗಿದೆ. ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರು ಈ ವಿಷಯ ಪ್ರಸ್ತಾಪಿಸಿದರು. ಈ ಕುರಿತು ಗಂಭೀರ ಚರ್ಚೆ ನಡೆಯಿತು.

ನಗರದ ಜೆರೋಸಾ ಶಾಲೆಯ ಗೇಟ್‌ನ ಎದುರು ಮಕ್ಕಳನ್ನು ಕರೆತರುವ ವಾಹನಗಳನ್ನು ನಿಲ್ಲಿಸುವುದರಿಂದ ಬೆಳಗ್ಗೆ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ಭಾರೀ ಟ್ರಾಫಿಕ್‌ ಸಮಸ್ಯೆ ಎದುರಾಗುತ್ತಿದೆ. ಶಾಲೆಯ ಒಳಗೆ ಜಾಗವಿದ್ದು, ವಾಹನಗಳಿಗೆ ಅಲ್ಲಿ ಪ್ರವೇಶ ನೀಡಿ ಮಕ್ಕಳನ್ನು ಬಿಟ್ಟು ಹೋಗಲು ಅವಕಾಶ ಕಲ್ಪಿಸಬೇಕು ಎಂದು ದಲಿತ ಮುಖಂಡ ಎಸ್‌.ಪಿ. ಆನಂದ್‌ ಪ್ರಸ್ತಾವಿಸಿದರು.

ನಗರದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಈ ಸಮಸ್ಯೆಗಳಿವೆ. ಶಿಕ್ಷಣ ಸಂಸ್ಥೆಗಳ ಜತೆ ಈ ಬಗ್ಗೆ ನಿರಂತರ ಸಭೆಗಳಾಗುತ್ತಿವೆ. ಆದರೆ ಶಾಲೆಯ ಆವರಣದಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಾಹನಗಳ ಪ್ರವೇಶಿಸಲು ನಿರ್ಬಂಧಿಸುತ್ತಿದ್ದಾರೆ ಎಂದು ಡಿಸಿಸಿ ಸಿದ್ಧಾರ್ಥ ಗೋಯಲ್ ಹೇಳಿದರು.

ನಗರದ ಬೆಥನಿ ಶಾಲೆಯಲ್ಲಿ ಹಿಂದೆ ಇದೇ ರೀತಿ ಸಮಸ್ಯೆ ಇದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಲಾ ಆರಂಭ ಹಾಗೂ ಮುಕ್ತಾಯದ ಸಮಯವನ್ನೇ ಬದಲಾಯಿಸಿ ಸುಗಮ ಟ್ರಾಫಿಕ್‌ ವ್ಯವಸ್ಥೆಗೆ ಅನುವು ಮಾಡಿದ್ದಾರೆ. ಅಂತಹ ವ್ಯವಸ್ಥೆ ಇತರ ಕಡೆಗೂ ಅನ್ವಯಿಸಿದರೆ ಉತ್ತಮ ಎಂದು ಸದಾಶಿವ ಉರ್ವಾಸ್ಟೋರ್‌ ತಿಳಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ನಡೆಸುವುದಾಗಿ ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ತಿಳಿಸಿದರು.

ಸಿಸಿ ಕ್ಯಾಮರಾ ಅಳವಡಿಸಿ:

ದಲಿತ ಕಾಲನಿಗಳಲ್ಲಿ ಹದಿಹರೆಯದ ಮಕ್ಕಳು ತಪ್ಪು ದಾರಿ ಹಿಡಿಯದಂತೆ, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂಬ ಬೇಡಿಕೆಯನ್ನು ಹಲವು ಸಮಯದಿಂದ ಮಾಡಲಾಗಿದೆ. ಆದರೆ ಕಾರ್ಯಗತವಾಗಿಲ್ಲ. ಈ ಬಗ್ಗೆ ಪೊಲೀಸ್‌ ಇಲಾಖೆ ಸಂಬಂಧಪಟ್ಟವರಿಗೆ ಸಲಹೆ ನೀಡಬೇಕು ಎಂದು ಅನಿಲ್‌ ಕಂಕನಾಡಿ ಮನವಿ ಮಾಡಿದ್ದಾರೆ.ನಗರ ಪಾಲಿಕೆಯಿಂದ ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕಾರ್ಯ ಮಂಗಳೂರಿನ ಗ್ರಾಮಾಂತರ ಪ್ರದೇಶದಿಂದ ಆರಂಭಿಸಲಾಗುತ್ತಿದೆ. ಆದರೆ ಕ್ಯಾಮರಾ ಅಳವಡಿಕೆ ಕಾರ್ಯ ಮಂಗಳೂರಿನ ನಗರ ಪ್ರದೇಶಗಳು ಮೊದಲು ಆಗಬೇಕು ಎಂದರು. ಈ ಬಗ್ಗೆ ಪಾಲಿಕೆಗೆ ಮಾಹಿತಿ ನೀಡುವುದಾಗಿ ಡಿಸಿಪಿ ದಿನೇಶ್‌ ಕುಮಾರ್‌ ತಿಳಿಸಿದರು.

ಕೂಲಿ ಕಾರ್ಮಿಕರಿಂದ ತೊಂದರೆ:

ಉರ್ವಸ್ಟೋರ್‌ನಲ್ಲಿ ಬಸ್ಟೇಂಡ್‌ ಅಥವಾ ರಸ್ತೆ ಬದಿಗಳಲ್ಲಿ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಗುಂಪುಗೂಡಿ ಇರುತ್ತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ ದಿನೇಶ್‌ ಕುಮಾರ್‌, ಈ ಬಗ್ಗೆ ಟ್ರಾಫಿಕ್‌ ಪೊಲೀಸರು ಸಾಕಷ್ಟು ಬಾರಿ ಸೂಚನೆ ನೀಡಿದರೂ ಮತ್ತೆ ಸಮಸ್ಯೆ ಪುನರಾವರ್ತನೆಯಾಗುತ್ತಿದೆ. ನಿರ್ಮಾಣ ಕಾಮಗಾರಿಗಾಗಿ ಕಾರ್ಮಿಕರನ್ನು ಸಾಗಿಸುವ ವಾಹನಗಳ ಮಾಲೀಕರು ಅಥವಾ ಗುತ್ತಿಗೆದಾರರನ್ನು ಕರೆಸಿ ಅವರಿಗೆ ಸಮೀಪದ ಮೈದಾನ ಅಥವಾ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದರು.

ಎಸಿಪಿ ಧನ್ಯಾ ನಾಯಕ್‌ ನಿರೂಪಿಸಿದರು. ಬಾಕ್ಸ್‌---

ಒಂದು ಲೈಟ್‌ ಕಂಬದ ಕತೆ!

ಕಳೆದ ನಾಲ್ಕೈದು ಸಭೆಗಳಲ್ಲಿ ಮಾತ್ರವಲ್ಲದೆ, ಈ ಸಭೆಯಲ್ಲೂ ಗಂಭೀರ ಚರ್ಚೆಗೆ ಕಾರಣವಾದ್ದು ಒಂದು ಲೈಟ್‌ ಕಂಬದ ಕತೆ.

ಕಿನ್ನಿಗೋಳಿ ಬಳಿ ರಾಮಚಂದ್ರ ಎಂಬವರ ಸ್ಥಳದಲ್ಲಿ ಲೈಟ್‌ ಕಂಬವೊಂದಿದೆ. ಅಲ್ಲೇ ಸಮೀಪ ಮೆಸ್ಕಾಂನ ಇನ್ನೊಂದು ಕಂಬ ಇದೆ. ಎರಡೂ ಕಂಬಗಳಿಗೆ ಬೀದಿದೀಪ ಅಳವಡಿಸಲಾಗಿದೆ. ತನ್ನ ಕಂಬಕ್ಕೂ ಬೀದಿದೀಪ ಅಳವಡಿಸಿದ್ದು, ಅದನ್ನು ತೆರವುಗೊಳಿಸುವಂತೆ ರಾಮಚಂದ್ರ ಆಗ್ರಹಿಸಿದ್ದಾರೆ. ಪ್ರತಿ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದಾಗ ಪೊಲೀಸ್‌ ಅಧಿಕಾರಿಗಳು ಸಮಸ್ಯೆ ನಿವಾರಿಸುವ ಭರವಸೆ ನೀಡುತ್ತಾರೆಯೇ ವಿನಃ ಅದು ಹಾಗೆಯೇ ಉಳಿಯುತ್ತದೆ ಎಂದು ಅವಲತ್ತುಕೊಂಡರು. ಗ್ರಾ.ಪಂ. ಪಿಡಿಒ ಮತ್ತು ಇವರ ನಡುವೆ ಇದು ಪ್ರತಿಷ್ಠೆಯ ವಿಷಯವಾಗಿ ಉಳಿದಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಕೋರಿ ಜಿ.ಪಂ. ಸಿಇಒಗೆ ಪತ್ರ ಬರೆಯುವುದಾಗಿ ಡಿಸಿಪಿ ದಿನೇಶ್‌ ಕುಮಾರ್‌ ಸೂಚಿಸಿದರು.